ಬೆಂಗಳೂರು:ಪ್ರಕರಣವೊಂದರ ವಾರಂಟ್ ಸಂಬಂಧ ವಶಕ್ಕೆ ಪಡೆದು ಠಾಣೆಗೆ ಕರೆತಂದ ಪೊಲೀಸರನ್ನೇ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಲೇಖಕಿ ಹಾಗೂ ಆತನ ಪುತ್ರನ ವಿರುದ್ಧ ಜ್ಞಾನಭಾರತಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜ್ಞಾನಭಾರತಿ ಪೊಲೀಸ್ ಠಾಣೆಯ ಮಹಿಳಾ ಪಿಎಸ್ಐ ಸುರೇಖಾ ಅವರು ನೀಡಿದ ದೂರಿನ ಅನ್ವಯ ಲೇಖಕಿ ಲಕ್ಷ್ಮೀ ಜಿ. ಪ್ರಸಾದ್ ಮತ್ತು ಆಕೆಯ ಪುತ್ರ ಅರವಿಂದ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
"ಹಳೇ ಪ್ರಕರಣವೊಂದರಲ್ಲಿ ಆರೋಪಿಯಾಗಿರುವ ಲೇಖಕಿ ಲಕ್ಷ್ಮೀ ಜಿ. ಪ್ರಸಾದ್ ವಿರುದ್ಧ ನಗರದ 6ನೇ ಎಸಿಎಂಎಂ ನ್ಯಾಯಾಲಯ ಬಂಧನದ ವಾರಂಟ್ ಜಾರಿಗೊಳಿಸಿತ್ತು. ಅದರಂತೆ ಜ್ಞಾನಭಾರತಿ ಠಾಣೆಯ ಪಿಎಸ್ಐ ಸುರೇಖಾ ಅವರು ಅಕ್ಟೋಬರ್ 23ರಂದು ಆರೋಪಿ ಲಕ್ಷ್ಮೀ ಜಿ. ಪ್ರಸಾದ್ ಅವರನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದಾರೆ".
"ಬಳಿಕ ಆರೋಪಿಗೆ ವೈದ್ಯಕೀಯ ಪರೀಕ್ಷೆ ಮಾಡಿಸಿ ನ್ಯಾಯಾಧೀಶರ ಎದುರು ಹಾಜರುಪಡಿಸಲು ಸಿದ್ಧತೆ ಮಾಡಿಕೊಳ್ಳುವಾಗ, ಆಕೆ ಏಕಾಏಕಿ ನನ್ನನ್ನು ಏಕೆ ಬಂಧಿಸುತ್ತೀರಿ? ನನ್ನಿಂದಲೇ ಎಷ್ಟೋ ಅಧಿಕಾರಿಗಳು ಜ್ಞಾನಭಾರತಿ ಠಾಣೆಯಲ್ಲಿ ಸಸ್ಪೆಂಡ್ ಆಗಿದ್ದಾರೆ. ನನ್ನನ್ನು ಬಂಧಿಸಲು ಬಿಡುವುದಿಲ್ಲ ಎಂದು ಪೊಲೀಸರನ್ನು ತಳ್ಳಾಡಿ, ಕೈಗಳಿಂದ ಹಲ್ಲೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ".