ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ (ETV Bharat) ಕಾರವಾರ (ಉತ್ತರ ಕನ್ನಡ): ಒಂದೇ ತಿಂಗಳಲ್ಲಿ ವಿವಿಧ ಅಕ್ರಮ ಚಟುವಟಿಕೆಯಲ್ಲಿ ತೊಡಗಿಕೊಂಡವರ ಮೇಲೆ ಪ್ರಕರಣ ದಾಖಲಿಸಿ 9 ಲಕ್ಷಕ್ಕೂ ಅಧಿಕ ದಂಡ ವಿಧಿಸಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಯನ್ನು ಶಾಸಕ ದಿನಕರ ಶೆಟ್ಟಿ ತೀವ್ರವಾಗಿ ತರಾಟೆ ತೆಗೆದುಕೊಂಡ ಘಟನೆ ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದಿದೆ.
ಬುಧವಾರದಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಅವರು ನಡೆಸುತ್ತಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಶಾಸಕ ದಿನಕರ ಶೆಟ್ಟಿ ಮಾತನಾಡಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಅವರಿಗೆ ಅತಿ ಹೆಚ್ಚು ದಂಡ ವಸೂಲಿ ಮಾಡಿರುವ ಬಗ್ಗೆ ಪ್ರಶಸ್ತಿ ನೀಡಬೇಕು. ಅವರು ಈವರೆಗೆ ಯಾರೂ ಮಾಡದ ಕೆಲಸವನ್ನು ಮಾಡಿದ್ದಾರೆ. ನಿಂತ ಗಾಡಿಗೆ ದಂಡ ಹಾಕಿದ್ದಾರೆ. ಚೀರೆಕಲ್ಲು, ಮಣ್ಣು ಸಾಗಾಟ ಮಾಡುವ ಗಾಡಿಗೂ ದಂಡ ಹಾಕಿದ್ದಾರೆ. ಕುಮಟಾದಲ್ಲಿ ಓರ್ವ ವ್ಯಕ್ತಿಗೆ 3 ಲಕ್ಷ ರೂ. ದಂಡ ಹಾಕಿದ್ದಾರೆ. ಬಿಜೆಪಿ ಕಾರ್ಯಕರ್ತರ ಗಾಡಿಗಳನ್ನೇ ಟಾರ್ಗೆಟ್ ಮಾಡಿ ಹಿಡಿಯುತ್ತಿದ್ದಾರೆ. ಆದರೆ ಬೇರೆಡೆ ಅಕ್ರಮ ಚಟುವಟಿಕೆ ನಡೆಯುತ್ತಿದ್ದರೂ ಕ್ರಮ ವಹಿಸುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಇದನ್ನೂ ಓದಿ:'ಹಿರಿತನ, ಬುದ್ಧಿಮತ್ತೆ, ಚಾರಿತ್ರ್ಯ ಪರಿಗಣಿಸಿದರೆ ಹಲವರು ಉನ್ನತ ಸ್ಥಾನದಲ್ಲಿರುತ್ತಿದ್ದರು': ಆರ್.ವಿ. ದೇಶಪಾಂಡೆ ಒಡಲಾಳದ ಇಂಗಿತ! - RV Deshpande
ಈ ಆರೋಪಗಳಿಗೆ ಸ್ಪಷ್ಟನೆ ನೀಡಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಆಶಾ, ಅಕ್ರಮ ಚಟುವಟಿಕೆ ನಡೆಸುತ್ತಿದ್ದವರನ್ನು ಪತ್ತೆ ಹಚ್ಚಿ ದಂಡ ಹಾಕಿದ್ದೇವೆ. ಆರೋಗ್ಯ ಸರಿ ಇಲ್ಲದೇ ಇದ್ದರೂ ಈ ಸಭೆಗೆ ಬಂದಿದ್ದೇನೆ. ಆದರೆ, ಯಾವುದೇ ಪ್ರಶಸ್ತಿಗಾಗಿ ನಾನು ಕೆಲಸ ಮಾಡಿಲ್ಲ. ಚುನಾವಣೆ ಸಂದರ್ಭ ಅಕ್ರಮ ಪತ್ತೆಯಾದವರ ವಿರುದ್ಧ ಪ್ರಕರಣ ದಾಖಲಿಸಿ ಒಂದು ತಿಂಗಳಲ್ಲಿ 9.5 ಲಕ್ಷ ರೂ. ದಂಡ ವಿಧಿಸಲಾಗಿದೆ. ಆದರೆ, ಯಾರನ್ನೂ ಉದ್ದೇಶ ಪೂರ್ವಕವಾಗಿ ಗುರಿಯಾಗಿಸಿಕೊಂಡಿಲ್ಲ. ಕುಮಟಾದಲ್ಲಿ ಅತಿ ಹೆಚ್ಚು ದೂರು ಬಂದ ಕಾರಣ ದಾಳಿ ಮಾಡಿದ್ದೇವೆ. ಇಲಾಖೆಯಲ್ಲಿ ನಾನೊಬ್ಬಳೇ ಅಧಿಕಾರಿ ಇರುವ ಕಾರಣ ಮಾಹಿತಿ ಬಂದ ಕಡೆ ತೆರಳಿ ನನ್ನ ಕರ್ತವ್ಯ ನಿರ್ವಹಿಸಿದ್ದೇನೆ. 3 ಲಕ್ಷ ರೂ. ದಂಡವನ್ನು ಒಬ್ಬರಿಗೆ ಒಂದೇ ಬಾರಿಗೆ ಹಾಕಿಲ್ಲ. ಮೂರು ಬಾರಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಅದಕ್ಕನುಗುಣವಾಗಿ ದಂಡ ವಿಧಿಸಲಾಗಿದೆ ಎಂದರು.
ಇದನ್ನೂ ಓದಿ:ಯುವಕನಿಗೆ ಚಿತ್ರಹಿಂಸೆ ನೀಡಿದ್ದ ಆರು ಪೊಲೀಸರಿಗೆ ಜೀವಾವಧಿ ಶಿಕ್ಷೆ! - Life Imprisonment To 6 Policemen
ಶಾಸಕರು ಹಾಗೂ ಅಧಿಕಾರಿ ಅವರ ವಾದ ಮುಂದುವರಿದಾಗ ಮಧ್ಯ ಪ್ರವೇಶಿಸಿದ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ ದೇಶಪಾಂಡೆ, ಅಧಿಕಾರಿಗಳು ಕರ್ತವ್ಯ ನಿಭಾಯಿಸಬೇಕು ಅದು ತಪ್ಪಲ್ಲ. ಆದರೆ ಒಬ್ಬರಿಗೆ ಮಾತ್ರ ದಂಡ ಹಾಕಿ, ಉಳಿದವರನ್ನು ಬಿಟ್ಟರೆ ಅದು ಸರಿಯಲ್ಲ. ಶಾಸಕರು ಗಂಭೀರ ಆರೋಪ ಮಾಡಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ಅವರು ಪರಿಶೀಲಿಸಬೇಕು ಎಂದು ಸೂಚಿಸಿದರು.