ಬೆಂಗಳೂರು: ಫೆಂಗಲ್ ಚಂಡಮಾರುತದಿಂದಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದ್ದು, ತರಕಾರಿ ಇಳುವರಿ ಮೇಲೆ ಪರಿಣಾಮ ಬೀರಿದೆ. ಇದರಿಂದಾಗಿ ಮಾರುಕಟ್ಟೆಗೆ ಪೂರೈಕೆ ಗಣನೀಯವಾಗಿ ಇಳಿದಿದ್ದು, ತರಕಾರಿ ಬೆಲೆ ಗಗನಕ್ಕೇರಿದೆ. ದಿಢೀರ್ ತರಕಾರಿ ಬೆಲೆ ಏರಿಕೆಯಿಂದಾಗಿ ಜನರ ಜೇಬಿಗೆ ಮತ್ತಷ್ಟು ಕತ್ತರಿ ಬಿದ್ದಿದೆ.
ಬೆಂಗಳೂರಿಗೆ ಅಕ್ಕಪಕ್ಕದ ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದ ಮತ್ತು ಪಕ್ಕದ ತಮಿಳುನಾಡಿನಿಂದಲೂ ನಿತ್ಯ ತರಕಾರಿ ಪೂರೈಕೆ ಆಗುತ್ತದೆ. ಆದರೆ ಇತ್ತೀಚೆಗೆ ಚಂಡಮಾರುತದಿಂದಾಗಿ ತಮಿಳುನಾಡು ಮತ್ತು ರಾಜ್ಯದ ಹಲವೆಡೆ ಭಾರೀ ಮಳೆಯಾಗಿ ಅಸ್ತವ್ಯಸ್ತ ಉಂಟಾಗಿದೆ. ಮಳೆಯಿಂದ ತರಕಾರಿ ಬೆಳೆಗೆ ಹಾನಿಯಾಗಿದ್ದು, ಇಳುವರಿ ಕಡಿಮೆಯಾಗಿದೆ. ಜೊತೆಗೆ ಕೆಲವೆಡೆ ತರಕಾರಿ ಕೆಟ್ಟು ಹೋಗಿದೆ. ಇದರಿಂದಾಗಿ ಮಾರುಕಟ್ಟೆಗೆ ಅಗತ್ಯಕ್ಕೆ ತಕ್ಕಷ್ಟು ಪ್ರಮಾಣದಲ್ಲಿ ತರಕಾರಿ ಪೂರೈಕೆಯಾಗದ ಕಾರಣ ಬೆಲೆ ಏರಿಕೆಯಾಗಿದೆ.