ಮಂಡ್ಯ: ಜಿಲ್ಲೆಯಲ್ಲಿ ಎಷ್ಟೇ ಕಟ್ಟುನಿಟ್ಟಿನ ಕ್ರಮಗಳು ಮತ್ತು ಜಾಗೃತಿ ವಹಿಸಿದರೂ ಭ್ರೂಣ ಪತ್ತೆ ಮತ್ತು ಹತ್ಯೆ ಪ್ರಕರಣಗಳು ನಿಲ್ಲುತ್ತಿಲ್ಲ. ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
ಹೆಲ್ತ್ ಕ್ವಾಟರ್ಸ್‌ನಲ್ಲೇ ಭ್ರೂಣ ಹತ್ಯೆ!: ಭಾನುವಾರ ತಡರಾತ್ರಿ ಪಾಂಡವಪುರ ಪಟ್ಟಣದ ಹೆಲ್ತ್ ಕ್ವಾಟರ್ಸ್‌ನಲ್ಲೇ ಭ್ರೂಣ ಹತ್ಯೆ ನಡೆಸುತ್ತಿದ್ದ ವೇಳೆ ಆರೋಗ್ಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪಾಂಡವಪುರ ತಾಲೂಕಾಸ್ಪತ್ರೆಯ ಇಬ್ಬರು ನೌಕರರು ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಮೈಸೂರಿನ ಮಹಿಳೆಯೊಬ್ಬರು ಮೂರನೇ ಮಗುವಿನ ಭ್ರೂಣ ಪತ್ತೆ ಮಾಡಿಸಿದ್ದು, ಹೆಣ್ಣೆಂದು ತಿಳಿದುಬಂದಿತ್ತು. ಈ ಹಿನ್ನೆಲೆಯಲ್ಲಿ ಗರ್ಭಪಾತ ಮಾಡಿಸಲು ಪಾಂಡವಪುರ ಪಟ್ಟಣಕ್ಕೆ ಬಂದಿದ್ದರು. ಖಚಿತ ಮಾಹಿತಿ ಮೇರೆಗೆ ತಡರಾತ್ರಿ ಅಧಿಕಾರಿಗಳು ದಾಳಿ ನಡೆಸಿ ಗರ್ಭಿಣಿಯನ್ನು ರಕ್ಷಿಸಿದ್ದಾರೆ. ತಾಲ್ಲೂಕು ಆಸ್ಪತ್ರೆಯಲ್ಲಿ ಡಿ ಗ್ರೂಪ್ ನೌಕರರಾಗಿ ಕೆಲಸ ಮಾಡುತ್ತಿದ್ದ ಆನಂದ್, ಅಶ್ವಿನಿ ಎಂಬವರನ್ನೂ ವಶಕ್ಕೆ ಪಡೆಯಲಾಗಿದೆ.