ಕರ್ನಾಟಕ

karnataka

ETV Bharat / state

ಮೂಢ ನಂಬಿಕೆಗೆ ಇಬ್ಬರು ಹೆಣ್ಣು ಮಕ್ಕಳ ಕೊಲೆ: ಪಾಪಿ ತಂದೆಗೆ ಜೀವಾವಧಿ ಶಿಕ್ಷೆ ಪ್ರಕಟ - Life Imprisonment

ಇಬ್ಬರು ಮಕ್ಕಳಿಗೆ ಫಿನಾಯಿಲ್ ಕುಡಿಸಿ ಕೊಲೆ ಮಾಡಿದ್ದ ಪಾಪಿ ತಂದೆಗೆ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.

By ETV Bharat Karnataka Team

Published : Jul 23, 2024, 11:00 PM IST

LIFE IMPRISONMENT
ಸಾಂದರ್ಭಿಕ ಚಿತ್ರ (ETV Bharat)

ಬೆಳಗಾವಿ: ಮೂಢನಂಬಿಕೆ ನಂಬಿ ಸ್ವಂತ ಇಬ್ಬರು ಮಕ್ಕಳಿಗೆ ವಿಷ ಮಿಶ್ರಿತ ಫಿನಾಯಿಲ್ ಕುಡಿಸಿ ಕೊಲೆ ಮಾಡಿದ್ದ ಪಾಪಿ ತಂದೆಯ ಕೃತ್ಯ ಸಾಬೀತಾಗಿದ್ದು, ಆರೋಪಿಗೆ ಕಠಿಣ ಜೀವಾವಧಿ ಶಿಕ್ಷೆಯನ್ನು ವಿಧಿಸಿ ಮಂಗಳವಾರ ಬೆಳಗಾವಿಯ 6ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. 2021ರ ಜುಲೈ ತಿಂಗಳಲ್ಲಿ ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ಕಂಗ್ರಾಳಿ ಕೆ.ಎಚ್. ರಾಮನಗರ 2ನೇ ಕ್ರಾಸ್ ನಿವಾಸಿ ಅನೀಲ್​ ಚಂದ್ರಕಾಂತ ಬಾಂದೇಕರ್ ಮಕ್ಕಳನ್ನ ಕೊಲೆ ಮಾಡಿದ ಆರೋಪಿ ಆಗಿದ್ದಾರೆ.

ಪ್ರಕರಣದ ಹಿನ್ನೆಲೆ:ತನ್ನ ಮನೆ ಮಾರಾಟ ಮಾಡಲು ಖರೀದಿಗೆ ಯಾರು ಮುಂದೆ ಬಾರದೇ ಇದ್ದುದರಿಂದ ಬಹಳ ಬೇಸರ ಮಾಡಿಕೊಂಡಿರುತ್ತಾನೆ. ಆಗ ಆತನಿಗೆ ರಾತ್ರಿ ಕನಸೊಂದು ಬೀಳುತ್ತದೆ. ತನ್ನ ಇಬ್ಬರೂ ಹೆಣ್ಣು ಮಕ್ಕಳನ್ನು ಕೊಂದು, ತನ್ನ ರಕ್ತವನ್ನು ಶಿವಲಿಂಗಕ್ಕೆ ಹಾಕಿದರೆ ತನ್ನ ಮನೆ ಮಾರಾಟ ಆಗುತ್ತದೆ ಮತ್ತು ಎಲ್ಲಾ ಕೆಲಸಗಳಲ್ಲಿ ಯಶಸ್ಸು ಆಗುತ್ತದೆ ಎಂದು ಕನಸು ಬಿದ್ದಿದೆ. ಅದನ್ನೇ ನಂಬಿದ್ದ ಅನೀಲ್ ತನ್ನ ಮಕ್ಕಳಾದ ಅಂಜಲಿ(8) ಹಾಗೂ ಅನನ್ಯ(4) ಅವರಿಗೆ ಫಿನಾಯಿಲ್ ಕುಡಿಸಿ, ಬಾಯಿ ಒತ್ತಿ ಹಿಡಿದು ಕೊಲೆ ಮಾಡಿದ್ದ. ಬಳಿಕ ಬ್ಲೇಡಿನಿಂದ ತನ್ನ ರಕ್ತವನ್ನು ಜಗಲಿಯಲ್ಲಿದ್ದ ಶಿವಲಿಂಗಕ್ಕೆ ಹಚ್ಚಿದ್ದ. ಈ ಕುರಿತು ಅನೀಲ ಬಾಂದೇಕರ್ ಪತ್ನಿ ಜಯಾ ಎಪಿಎಂಸಿ ಠಾಣೆಯಲ್ಲಿ ತನ್ನ ಪತಿ ವಿರುದ್ಧ ದೂರು ನೀಡಿದ್ದರು. ಆರೋಪಿಯ ಪತ್ನಿ ನೀಡಿದ ದೂರಿನ ಮೇರೆಗೆ ಕಲಂ: 302 ಐಪಿಸಿ ಅಡಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದ ಎಪಿಎಂಸಿ ಠಾಣೆಯ ಅಂದಿನ ಆರಕ್ಷಕ ನಿರೀಕ್ಷಕ ಮಂಜುನಾಥ ಹಿರೇಮಠ, ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಪೊಲೀಸ್ ತನಿಖೆ ಸಾಕ್ಷಾಧಾರಗಳನ್ನು ಹಾಗೂ ವಾದವನ್ನು ಆಲಿಸಿದ 6ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಚ್.ಎಸ್. ಮಂಜುನಾಥ ಅವರು, ಆರೋಪಿ ಅನೀಲ್ ಬಾಂದೇಕರ್ ಕೃತ್ಯ ಸಾಬೀತಾದ ಹಿನ್ನೆಲೆಯಲ್ಲಿ ಆತನಿಗೆ ಜೀವಾವಧಿ ಶಿಕ್ಷೆ ಹಾಗೂ 20 ಸಾವಿರ ರೂ. ದಂಡವನ್ನು ವಿಧಿಸಿ ತೀರ್ಪು ನೀಡಿದ್ದಾರೆ.

ನಸ್ರೀನ್ ಬಂಕಾಪುರೆ ಸಾರ್ವಜನಿಕ ಅಭಿಯೋಜಕರಾಗಿ ವಾದ ಮಂಡಿಸಿದ್ದರು. ಆರೋಪಿಗೆ ಶಿಕ್ಷೆ ಕೊಡಿಸುವಲ್ಲಿ ಶ್ರಮಿಸಿದ ಎಪಿಎಂಸಿ ಠಾಣೆ ಅಂದಿನ ಪಿಐ ಮಂಜುನಾಥ ಹಿರೇಮಠ ಹಾಗೂ ತನಿಖಾ ಸಹಾಯಕ ವೀರಭದ್ರ ಬೂದನವರ ಕಾರ್ಯಕ್ಕೆ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ವೈಷ್ಣೋದೇವಿ ದೇವಸ್ಥಾನದ ಧರ್ಮದರ್ಶಿ ದೇವೇಂದ್ರಪ್ಪ ಹತ್ಯೆ ಪ್ರಕರಣ: ಆರೋಪಿ ಬಂಧನ - Hubballi Murder Case

ABOUT THE AUTHOR

...view details