ದಾವಣಗೆರೆ: ಜಿಲ್ಲೆಯ ಜಗಳೂರು ತಾಲೂಕಿನ ಚಿಕ್ಕಮ್ಮನಹಟ್ಟಿ 'ಬರಪೀಡಿತ ಗ್ರಾಮ' ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ಇಲ್ಲಿಯ ಬಹುತೇಕ ಗ್ರಾಮಗಳು ಬರದಿಂದ ಕೂಡಿವೆ. ಹನಿನೀರಿಗೂ ಗ್ರಾಮಾಂತರ ಭಾಗದ ಜನ ತಾತ್ವರ ಪಡುತ್ತಿದ್ದರು. ಆದರೆ ಇದೀಗ ಚಿಕ್ಕಮ್ಮನಹಟ್ಟಿ ಗ್ರಾಮದಲ್ಲಿ ಕೆರೆ ನಿರ್ಮಾಣ ಮಾಡಲಾಗಿದೆ. ಕೆರೆಗೆ ಜೀವಜಲ ಹರಿದು ಬಂದಿದ್ದರಿಂದ ಗ್ರಾಮದ ರೈತರು ಸಂತಸ ವ್ಯಕ್ತಪಡಿಸಿದ್ದಾರೆ.
ಮಳೆರಾಯನ ಕೃಪೆಯಿಂದ ಇಡೀ ಕೆರೆ ತುಂಬಿದ ಪರಿಣಾಮ ರೈತರು ಅಡಿಕೆ ತೋಟಗಳನ್ನು ಮಾಡಲು ಹೊರಟಿದ್ದಾರೆ. ಕೊಳವೆ ಬಾವಿಗಳ ಅಂತರ್ಜಲ ಮಟ್ಟ ವೃದ್ಧಿಯಾಗಿದೆ. ಬೆಳೆಗೆ ಭರಪೂರ ನೀರು ಸಿಗುತ್ತಿದೆ.
ರೈತ ಕರಿಯಪ್ಪ ಮಾತನಾಡಿ, "ಗ್ರಾಮದಲ್ಲಿ 700 ಅಡಿ ಕೊಳವೆ ಬಾವಿ ಕೊರೆದರೂ ನೀರು ಸಿಗುತ್ತಿರಲಿಲ್ಲ. ಏಕೆಂದರೆ ಇದು ಬರಪೀಡಿತ ಭೂಮಿ. ಈಗ ಕೆರೆ ನಿರ್ಮಿಸಿ ನೀರು ಹರಿದು ಬಂದಿದ್ದು ಹತ್ತಿ, ಮೆಕ್ಕೆಜೋಳ, ರಾಗಿ ಎಲ್ಲಾ ಬೆಳೆಗೆ ಉಪಯೋಗವಾಗಲಿದೆ. ನೀರು ಸಮೃದ್ಧವಾಗಿ ಸಿಗುತ್ತಿರುವುದರಿಂದ ಈಗಾಗಲೇ ಅಡಿಕೆ ಹಾಕಿದ್ದೇವೆ. ಸಾವಿರಾರು ಎಕರೆ ಪ್ರದೇಶಕ್ಕೆ ಇಲ್ಲಿನ ನೀರು ಉಪಯೋಗವಾಗಲಿದೆ" ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.