ಬೆಳಗಾವಿ:ಸಾಂಬ್ರಾ ವಿಮಾನ ನಿಲ್ದಾಣ ವಿಸ್ತರಣೆ ಕಾಮಗಾರಿಗೆ ಭೂಮಿ ನೀಡಿದವರಿಗೆ ಸರ್ಕಾರದಿಂದ ಪರಿಹಾರ ದೊರೆತಿಲ್ಲ. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದ ಮೇರೆಗೆ ರೈತರು ಬುಧವಾರ ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿಯಲ್ಲಿನ ಪೀಠೋಪಕರಣಗಳನ್ನು ವಶಕ್ಕೆ ಪಡೆದರು.
2008ರಲ್ಲಿ ವಿಮಾನ ನಿಲ್ದಾಣ ವಿಸ್ತರಣೆ ಕಾಮಗಾರಿಗೆ ರೈತರು 270 ಎಕರೆ ಜಮೀನು ನೀಡಿದ್ದರು. ಪ್ರತಿ ಎಕರೆಗೆ 2 ಲಕ್ಷ ರೂ ಪರಿಹಾರ ನೀಡುವಂತೆ ಸರ್ಕಾರ ಆದೇಶಿಸಿತ್ತು. ಇದಕ್ಕೊಪ್ಪದ ರೈತರು ಹೆಚ್ಚಿನ ಪರಿಹಾರ ಕೋರಿ 2011ರಲ್ಲಿ ಬೆಳಗಾವಿಯ ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಪ್ರತಿ ಗುಂಟೆಗೆ 40 ಸಾವಿರ ರೂ. ಪರಿಹಾರ ನೀಡುವಂತೆ 2018ರಲ್ಲಿ ಆದೇಶಿಸಿತ್ತು.
ಸಕಾಲಕ್ಕೆ ಪರಿಹಾರ ಸಿಗದ ಕಾರಣ ರೈತರು ಮತ್ತೆ ನ್ಯಾಯಾಲಯದ ಮೆಟ್ಟಿಲೇರಿದ್ದರು. ರೈತರಿಗೆ ತಕ್ಷಣವೇ ನ್ಯಾಯಯುತ ಪರಿಹಾರ ನೀಡುವಂತೆ 2021ರಲ್ಲಿ ನ್ಯಾಯಾಲಯ ಪುನಃ ಆದೇಶಿಸಿತ್ತು. ಪರಿಹಾರ ನೀಡದಿದ್ದರೆ ಬೆಳಗಾವಿ ಉಪವಿಭಾಗಾಧಿಕಾರಿ ಕಚೇರಿಯಲ್ಲಿನ ವಸ್ತು ಜಪ್ತಿ ಮಾಡುವಂತೆ ರೈತರಿಗೆ ಸೂಚಿಸಿತ್ತು. ಇಂದು ಅಥವಾ ನಾಳೆ ಪರಿಹಾರ ಸಿಗಬಹುದೆಂದು ಮೂರು ವರ್ಷಗಳಿಂದ ಕಾದ ರೈತರು ಇದೀಗ ಜಪ್ತಿ ಮಾಡಿಕೊಂಡಿದ್ದಾರೆ.