ಚಿಕ್ಕಮಗಳೂರು:ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬಲಿಯಾಗಿದೆ. ಚಿಕ್ಕಮಗಳೂರು ತಾಲೂಕು ಆಲ್ದೂರು ಸಮೀಪದ ಕಂಚಿನಕಲ್ ದುರ್ಗದ ಬಳಿ ಕೂಲಿ ಕಾರ್ಮಿಕರೊಬ್ಬರನ್ನು ಕಾಡಾನೆ ತುಳಿದು ಸಾಯಿಸಿದೆ. ಆನಂದ ಪೂಜಾರಿ(55) ಮೃತಪಟ್ಟ ಕೂಲಿ ಕಾರ್ಮಿಕ. ಭಾನುವಾರ ಮುಂಜಾನೆ ಆನಂದ ಪೂಜಾರಿ ಅವರು ತೋಟದ ಕೆಲಸಕ್ಕೆ ತೆರಳುತ್ತಿದ್ದರು. ಆಗ ಕಾಡಾನೆ ದಾಳಿ ನಡೆಸಿದೆ. ಕಾಡಾನೆಯ ದಾಳಿಯಿಂದ ಆನಂದ ಪೂಜಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ನೂರ್ ಅಹಮ್ಮದ್ ಎಂಬುವರಿಗೆ ಸೇರಿದ ಕೆಸುವಿನಕಲ್ ಎಸ್ಟೇಟ್ನಲ್ಲಿ ಈ ದುರ್ಘಟನೆ ನಡೆದಿದ್ದು, ಮೃತ ಆನಂದ ಪೂಜಾರಿ ಹಲವು ವರ್ಷಗಳಿಂದ ಈ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದರು. ಘಟನಾ ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಸದಸ್ಯ ರಾಜು ಪೂಜಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇತ್ತೀಚೆಗೆ, ಆಲ್ದೂರು ಭಾಗದಲ್ಲಿ ಇಬ್ಬರನ್ನು ಕಾಡಾನೆ ತುಳಿದು ಸಾಯಿಸಿತ್ತು. ಸದ್ಯ ಈ ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.