ಮಂಗಳೂರು: ತಮಿಳು ಚಿತ್ರರಂಗದ ಖ್ಯಾತ ನಟ ವಿಶಾಲ್ ಅವರು ತುಳುನಾಡಿನ ನೇಮದಲ್ಲಿ ಭಾಗಿಯಾಗಿ ದೈವದ ಕೃಪೆಗೆ ಪಾತ್ರರಾಗಿದ್ದಾರೆ. ಮಂಗಳೂರು ನಗರದ ಹೊರವಲಯದ ಪಕ್ಷಿಕೆರೆ ಪಂಜ - ಕೊಯ್ಕುಡೆ ಸಮೀಪದ ಹರಿಪಾದೆಯಲ್ಲಿ ಧರ್ಮದೈವ ಜಾರಂದಾಯನ ವಾರ್ಷಿಕ ನೇಮ ನಡೆದಿದೆ. ದೈವದ ನೇಮಕ್ಕೆ ಆಗಮಿಸಿದ ನಟ ವಿಶಾಲ್ ಜಾರಂದಾಯ ದೈವಕ್ಕೆ ಮಲ್ಲಿಗೆ ಹೂವು ಅರ್ಪಿಸಿ, ಸುಮಾರು ಮೂರು ಗಂಟೆಗಳ ಕಾಲ ಭಕ್ತಿಯಿಂದ ನೇಮ ನೋಡಿದ್ದಾರೆ.
ಸಂಡಕೋಳಿ, ತಿಮಿರು, ಪಾಂಡಿಯ ನಾಡು, ಪೂಜೈ ಮೊದಲಾದ ಜನಪ್ರಿಯ ಚಿತ್ರಗಳಲ್ಲಿ ನಟಿಸಿ ಜನಪ್ರಿಯರಾಗಿರುವ ವಿಶಾಲ್ ಅವರು ಇದೀಗ ಕರಾವಳಿ ಪ್ರವಾಸದಲ್ಲಿದ್ದಾರೆ. ಮಂಗಳವಾರ ಅವರು ಕೊಲ್ಲೂರು ಮತ್ತು ಉಡುಪಿ ದೇಗುಲಕ್ಕೆ ಭೇಟಿ ನೀಡಿದ್ದರು. ಇದರ ನಡುವೆ ಅವರು ಕಾರಣಿಕ ದೈವವೆಂದೇ ಹೆಸರಾದ ಪಕ್ಷಿಕೆರೆ ಹರಿಪಾದೆಯ ಜಾರಂದಾಯ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು ಎಂದು ಕ್ಷೇತ್ರದ ವ್ಯವಸ್ಥಾಪಕ ಅಶ್ವಿನ್ ಶೇಖ್ ತಿಳಿಸಿದ್ದಾರೆ.
ಜಾರಂದಾಯ ದೈವನೇಮದಲ್ಲಿ ಭಾಗಿಯಾದ ನಟ ವಿಶಾಲ್ (ETV Bharat) ವಿಶಾಲ್ ಮಂಗಳವಾರ ರಾತ್ರಿ ಸುಮಾರು 10.30ರ ಹೊತ್ತಿಗೆ ಕುಟುಂಬ ಸಮೇತ ದೈವಸ್ಥಾನಕ್ಕೆ ಆಗಮಿಸಿದರು. ಅಷ್ಟು ಹೊತ್ತಿಗೆ ಕ್ಷೇತ್ರದಲ್ಲಿ ಗಗ್ಗರ ಸೇವೆಗೆ ಅಣಿಯಾಗುತ್ತಿತ್ತು. ಕೈಯಲ್ಲಿ ಮಲ್ಲಿಗೆ ಚೆಂಡು ಹಿಡಿದಿದ್ದ ವಿಶಾಲ್ ಅವರು ಭಕ್ತಿಯಿಂದ ಗಗ್ಗರ ಸೇವೆ ವೀಕ್ಷಿಸಿದರು. ಬಳಿಕ ಅವರನ್ನು ಕೊಡಿಯಡಿಗೆ ಕರೆಯಲಾಯಿತು. ಈ ವೇಳೆ, ಅವರು ತಮ್ಮ ಆರೋಗ್ಯ ವೃದ್ಧಿಗಾಗಿ ಅನುಗ್ರಹ ಕೋರಿ ಬಂದಿರುವುದಾಗಿ ಹೇಳಿ ಆಶೀರ್ವಾದ ಬಯಸಿದರು. ಈ ನಡುವೆ ದೈವ ಜೀಟಿಗೆ ಮರ್ಯಾದೆಯೊಂದಿಗೆ ಅಭಯ ನೀಡಿತು. ಇತ್ತ ಅರ್ಚಕರು, ಕ್ಷೇತ್ರದ ತುಲಾಭಾರ ಸೇವೆಯು ಭಾರಿ ಕಾರಣಿಕದ್ದಾಗಿದ್ದು, ನೀವು ಆರೋಗ್ಯವಂತರಾಗಿ ಬಂದು ಮುಂದಿನ ವರ್ಷ ತುಲಾಭಾರ ಸೇವೆ ಕೊಡಿಸಿ ಎಂದು ಸಲಹೆ ನೀಡಿದರು. ವಿಶಾಲ್ ಅವರು ಅದಕ್ಕೆ ಒಪ್ಪಿ ಮುಂದಿನ ವರ್ಷ ಬರುವುದಾಗಿ ಹೇಳಿದರು. ರಾತ್ರಿ ಸುಮಾರು 1 ಗಂಟೆ ಹೊತ್ತಿಗೆ ಅವರು ನಿರ್ಗಮಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಶಾಲ್ ಅವರು ಕಾಂತಾರ ಸಿನಿಮಾದಲ್ಲಿ ದೈವಾರಾಧನೆ ನೋಡಿದ್ದೆ. ಇದೇ ಮೊದಲ ಬಾರಿಗೆ ನೇಮವನ್ನು ನೋಡಿದ್ದೇನೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ರಸ್ತೆ ಉದ್ದಕ್ಕೂ ದೈವಾವೇಷದಲ್ಲಿ ಸಂಚರಿಸಿ ಬ್ರಹ್ಮರಾಕ್ಷಸನ ಉಚ್ಛಾಟಿಸಿದ ದೈವ: ಏನಿದು ವಿಶಿಷ್ಟ ಆಚರಣೆ?