ಚಾಮರಾಜನಗರ: ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಮನೆಗಳನ್ನು ತೊರೆದ ಘಟನೆಗೆ ಸಂಬಂಧಿಸಿದಂತೆ ಪರಿಸ್ಥಿತಿ ಗಂಭೀರತೆ ಕಂಡು ಎಚ್ಚೆತ್ತ ಅಧಿಕಾರಿಗಳು ಇಂದು ಚಾಮರಾಜನಗರ ತಾಲೂಕಿನ ಹೆಗ್ಗವಾಡಿಪುರ ಮತ್ತು ದೇಶವಳ್ಳಿ ಗ್ರಾಮಗಳಿಗೆ ಭೇಟಿ ನೀಡಿದರು. ಈ ವೇಳೆ ಅಧಿಕಾರಿಗಳ ಮುಂದೆ ಗ್ರಾಮಸ್ಥರು ಮೈಕ್ರೋ ಫೈನಾನ್ಸ್ ಪ್ರತಿನಿಧಿಗಳ ಕಿರುಕುಳದ ವಿರುದ್ಧ ಅಳಲು ತೋಡಿಕೊಂಡರು.
ಮೈಕ್ರೋ ಫೈನಾನ್ಸ್ನವರ ಕಿರುಕುಳಕ್ಕೆ ಬೇಸತ್ತು ಊರು ತೊರೆದ ಬಗ್ಗೆ ಈಟಿವಿ ಭಾರತ ವರದಿ ಬಿತ್ತರಿಸಿದ್ದನ್ನು ಕಂಡ ಅಧಿಕಾರಿಗಳು ಊರುಗಳಿಗೆ ದೌಡಾಯಿಸಿ ಜನರ ಸಮಸ್ಯೆ ಆಲಿಸಿದರು. ಊರಿಗೆ ಬಂದ ಚಾಮರಾಜನಗರ ತಹಶೀಲ್ದಾರ್ ಗಿರಿಜಾ ಸೇರಿದಂತೆ ಇತರೆ ಅಧಿಕಾರಿಗಳನ್ನು ಕಂಡ ಜನರು ಸಾಲು ಸಾಲು ಸಮಸ್ಯೆಗಳನ್ನು ಮುಂದಿಟ್ಟರು. ರಾತ್ರಿ ಬಂದು ಬಾಗಿಲು ತಟ್ಟಿ ಹಣ ಕೊಡಿ ಅಂತಾರೆ, ಒಂದು ದಿನ ತಡವಾದರೂ ಬಾಯಿಗೆ ಬಂದಂತೆ ಬೈಯುತ್ತಾರೆ, ಅವಾಚ್ಯವಾಗಿ ನಿಂದಿಸುತ್ತಾರೆ. ಯಾಕಾದರೂ ಸಾಲ ಮಾಡಿದೆವೋ ಎಂಬ ಪರಿಸ್ಥಿತಿಗೆ ತಂದು ನಮ್ಮನ್ನು ನಿಲ್ಲಿಸಿದ್ದಾರೆಂದು ಜನರು ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡರು.
ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಹೆದರಿ ಹೆಗ್ಗವಾಡಿಪುರ ಮತ್ತು ದೇಶವಳ್ಳಿ ಗ್ರಾಮಗಳಿಂದ ಊರು ಬಿಟ್ಟು ಹೋಗಿರುವವರ ಮನೆಗಳನ್ನು ಅಧಿಕಾರಿಗಳು ಗ್ರಾಮಸ್ಥರೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ದೇಶವಳ್ಳಿ ಗ್ರಾಮದಲ್ಲಿ ಒಟ್ಟು 6 ಕುಟುಂಬಗಳು ಮಕ್ಕಳನ್ನು ಶಾಲೆ ಬಿಡಿಸಿ ಊರು ಬಿಟ್ಟಿರುವುದು ಅಧಿಕಾರಿಗಳ ಭೇಟಿಯಲ್ಲಿ ಗೊತ್ತಾಯಿತು.
ಹೆಗ್ಗವಾಡಿಪುರ ಗ್ರಾಮದ ವಿದ್ಯಾರ್ಥಿಯೋರ್ವ ತಮ್ಮ ಕುಟುಂಬಕ್ಕೆ ಆಗುತ್ತಿರುವ ಕಿರುಕುಳವನ್ನು ತಹಶೀಲ್ದಾರ್ಗೆ ತಿಳಿಸಿದನು. ದೇಶವಳ್ಳಿ ಗ್ರಾಮದ ಶೋಶಾ, ಸುಮಾ, ಶಾರದಾ, ಹೆಗ್ಗವಾಡಿಪುರ ಗ್ರಾಮದ ನಾಗಮ್ಮ ಮತ್ತು ಪುಟ್ಟತಾಯಮ್ಮ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಹೆದರಿ ಊರು ಬಿಟ್ಟಿರುವುದು ತಹಶೀಲ್ದಾರ್ ಭೇಟಿ ವೇಳೆ ಗೊತ್ತಾಯಿತು.
ಭಯ ಪಡಬೇಡಿ : ತಹಶೀಲ್ದಾರ್ ಗಿರಿಜಾ ಮಾತನಾಡಿ, ಮೈಕ್ರೋ ಫೈನಾನ್ಸ್ ಕುರಿತು ಜಾಗೃತಿ ನೀಡಲು ಮುಂದಿನ ವಾರ ಒಂದು ದಿನ ಗ್ರಾಮಸಭೆ ನಡೆಸಲಾಗುತ್ತದೆ. ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿ ಭಯ ಪಡಬೇಡಿ. ಯಾರಾದರೂ ಕಿರುಕುಳ ನೀಡಿದ್ದಲ್ಲಿ ಜಿಲ್ಲಾಡಳಿತ ಸಹಾಯವಾಣಿ/ಪೊಲೀಸ್ ಸಹಾಯವಾಣಿಗೆ ಅಥವಾ ಸ್ಥಳೀಯ ಅಧಿಕಾರಿಗಳಿಗೆ ದೂರು ಸಲ್ಲಿಸಿ, ಜನರ ಜೊತೆ ಜಿಲ್ಲಾಡಳಿತ ಇರಲಿದೆ ಎಂದು ಅಭಯ ನೀಡಿದರು.