ಕರ್ನಾಟಕ

karnataka

ETV Bharat / state

ಅರಮನೆ ಸಮೀಪ ಪಾರಿವಾಳಗಳಿಗೆ ಆಹಾರ ಹಾಕದಂತೆ ಸೂಚನೆ: ತಜ್ಞರು, ಪಕ್ಷಿಪ್ರೇಮಿಗಳು ಹೇಳಿದ್ದೇನು? - Bird Lovers Reactions - BIRD LOVERS REACTIONS

ಪಾರಿವಾಳಗಳಿಗೆ ಹಾಕುವ ಅತಿಯಾದ ಆಹಾರ ಧಾನ್ಯಗಳ ವ್ಯರ್ಥದಿಂದ ಹಾಗೂ ಪಾರಿವಾಳಗಳ ಹಿಕ್ಕೆಯಿಂದ ಅರಮನೆಯ ಸ್ವಚ್ಛತೆ ಮತ್ತು ಅಂದಕ್ಕೆ ಹಾನಿಯಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಕುರಿತು ತಜ್ಞರು, ಪಕ್ಷಿಪ್ರೇಮಿಗಳು ಈಟಿವಿ ಭಾರತ್​ಗೆ ಪ್ರತಿಕ್ರಿಯಿಸಿದ್ದಾರೆ.

ತಜ್ಞರು, ಪಕ್ಷಿ ಪ್ರೇಮಿಗಳ ಪ್ರತಿಕ್ರಿಯೆ
ತಜ್ಞರು, ಪಕ್ಷಿ ಪ್ರೇಮಿಗಳ ಪ್ರತಿಕ್ರಿಯೆ (ETV Bharat)

By ETV Bharat Karnataka Team

Published : Jun 28, 2024, 9:19 PM IST

ತಜ್ಞರು, ಪಕ್ಷಿ ಪ್ರೇಮಿಗಳ ಪ್ರತಿಕ್ರಿಯೆ (ETV Bharat)

ಮೈಸೂರು: ಪ್ರವಾಸಿಗರು, ಸಾರ್ವಜನಿಕರು ಪಾರಿವಾಳಗಳಿಗೆ ಹಾಕುವ ಅತಿಯಾದ ಆಹಾರ ಧಾನ್ಯಗಳ ವ್ಯರ್ಥದಿಂದ ಹಾಗೂ ಪಾರಿವಾಳಗಳ ಹಿಕ್ಕೆಯಿಂದ ಇಲ್ಲಿನ ವಿಶ್ವವಿಖ್ಯಾತ ಮೈಸೂರು ಅರಮನೆಯ ಸ್ವಚ್ಛತೆ ಹಾಗೂ ಸೌಂದರ್ಯ ಹಾಳಾಗುತ್ತಿದೆ. ಇದರ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಪ್ರಗತಿ ಪ್ರತಿಷ್ಠಾನದ ಅಧ್ಯಕ್ಷ ಅಜಯ್ ಕುಮಾರ್ ಜೈನ್ 'ಈಟಿವಿ ಭಾರತ್​' ಜೊತೆ ಮಾತನಾಡಿ, ಅರಮನೆಯ ಸಮೀಪದಲ್ಲಿರುವ ಕೋಟೆ ಆಂಜನೇಯ ಸ್ವಾಮಿ ದೇವಾಲಯದೆದುರು ಜನರು ಪಕ್ಷಿಗಳಿಗೆ ಒಂದು ಮುಷ್ಟಿ ಧಾನ್ಯ ಹಾಕುವ ಪದ್ಧತಿ ಹಿಂದಿನಿಂದಲೂ ಇದೆ. ಆದರೆ ಇತ್ತೀಚೆಗೆ ಜನರು ಹೆಚ್ಚಾಗಿ ಧಾನ್ಯಗಳನ್ನು ತಂದು ಹಾಕುತ್ತಿದ್ಧಾರೆ. ಇದರಿಂದ ಪಾರಿವಾಳಗಳು ಅಲ್ಲೇ ಬೀಡುಬಿಟ್ಟು, ಅರಮನೆ ಮೇಲೆ ಕುಳಿತು ಹಿಕ್ಕೆ ಹಾಕುತ್ತಿವೆ. ಹೀಗಾಗಿ ಅಲ್ಲಿ ಒಂದೇ ಕಡೆ ಧಾನ್ಯಗಳನ್ನು ಹಾಕುವ ಬದಲು ಬೇರೆ ಬೇರೆ ಕಡೆ ಸ್ಪಲ್ವ ಪ್ರಮಾಣದಲ್ಲಿ ಹಾಕಿದರೆ ಪಕ್ಷಗಳು ಬಂದು ತಿಂದುಕೊಂಡು ಹೋಗುತ್ತವೆ. ದಿಢೀರ್​ ಎಂದು ಈಗ ಧಾನ್ಯಗಳನ್ನು ಹಾಕುವುದನ್ನು ನಿಲ್ಲಿಸಿದರೆ ಅಲ್ಲೇ ಬೀಡುಬಿಟ್ಟಿರುವ ಪಾರಿವಾಳಗಳಿಗೆ ತೊಂದರೆಯಾಗಲಿದೆ" ಎಂದು ಹೇಳಿದರು.

ವನ್ಯಜೀವಿ ತಜ್ಞ ರಾಜ​ಕುಮಾರ್ ದೇವರಾಜ್ ಅರಸ್ ಮಾತನಾಡಿ, "ಎಲ್ಲಾ ಪ್ರಾಣಿ-ಪಕ್ಷಿಗಳಿಗೂ ಆಹಾರ ಮತ್ತು ಸಂತಾನೋತ್ಪತ್ತಿ ಜೀವನಕ್ರಮವಾಗಿರುತ್ತದೆ. ಮನುಷ್ಯರು ಸೇವಿಸುವ ಆಹಾರದಲ್ಲಿ ಹೆಚ್ಚು ಪ್ರೋಟೀನ್​ ಅಂಶ ಇರುತ್ತದೆ. ಇದು ಪಕ್ಷಿಗಳಿಗೆ ಬೇಕಿಲ್ಲ. ನಾವು ಅಲ್ಲಿ ಅವುಗಳಿಗೆ ಆಹಾರ ಹಾಕುವುದನ್ನು ಬಿಟ್ಟರೆ ಅವೇ ತಮ್ಮ ಆಹಾರ ಅರಸಿಕೊಂಡು ಹೋಗುತ್ತವೆ. ಅರಮನೆ ಸುತ್ತಾಮುತ್ತ ಮನುಷ್ಯರೇ ಇರುವುದರಿಂದ ಅವುಗಳಿಗೆ ಬೇರೆ ಪ್ರಾಣಿ - ಪಕ್ಷಿಗಳಿಂದ ಅಪಾಯವಿಲ್ಲ. ಹೀಗಾಗಿ ಅಲ್ಲಿ ಪಾರಿವಾಳ ಸಂತಾನೋತ್ಪತಿ ಹೆಚ್ಚಾಯ್ತು. ಪಾರಿವಾಳ ಹಿಕ್ಕೆಯಲ್ಲಿ ಹೆಚ್ಚು ಕ್ಯಾಲ್ಸಿಯಂ ಇರುತ್ತದೆ. ಹೀಗಾಗಿ ಅವು ಪಾರಂಪರಿಕ ಮತ್ತು ಇತರೆ ಕಟ್ಟಡ ಮೇಲೆ ಹಿಕ್ಕೆ ಹಾಕಿದರೆ ಹಾನಿಯಾಗುತ್ತದೆ. ನಾವು ತಿನ್ನುವ ಆಹಾರವನ್ನು ಪ್ರಾಣಿ - ಪಕ್ಷಿಗಳಿಗೆ ನೀಡುವ ಅವಶ್ಯಕತೆ ಇಲ್ಲ. ಜಿಲ್ಲಾಧಿಕಾರಿಗಳು ಕ್ರಮಕ್ಕೆ ಸೂಚನೆ ನೀಡಿರುವುದು ಒಳ್ಳೆಯದು" ಎಂದು ಅಭಿಪ್ರಾಯಪಟ್ಟರು.

ದಂಡ ಹಾಕುವ ನಿಯಮ ತರಬೇಕು:ಪ್ರಾಣಿ ಸಂರಕ್ಷಕ ಪ್ರದೀಪ್​ ಮಾತನಾಡಿ, "ಮೈಸೂರು ಪಾರಿವಾಳಗಳ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಬೇರೆ ಪಕ್ಷಿಗಳೂ ತೊಂದರೆಯಾಗುತ್ತಿದೆ. ಇಲ್ಲಿ ಕಾಗೆ, ಮೈನಾ ಹಕ್ಕಿಗಳ ಸಂಖ್ಯೆ ಕಡಿಮೆಯಾಗುತ್ತದೆ. ಇವು ನಗರದ ಸ್ವಚ್ಛತೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ. ಆದ್ದರಿಂದ ಪಾರಿವಾಳಗಳಿಗೆ ಆಹಾರ ಹಾಕುವುದನ್ನು ನಿಲ್ಲಿಸಿದರೆ ಒಳ್ಳೆಯದು. ಮಹಾರಾಷ್ಟ್ರದ ಆರೋಗ ಸಂಸ್ಥೆ ಪಾರಿವಾಳಗಳಿಗೆ ಆಹಾರ ಹಾಕುವುದನ್ನು ನಿಷೇಧಿಸಿದೆ. ಉಲ್ಲಂಘಿಸಿದವರಿಗೆ 500 ರೂಪಾಯಿ ದಂಡ ಹಾಕುತ್ತಿದ್ದಾರೆ. ಇಂತಹ ನಿಯಮವನ್ನು ಇಲ್ಲಿಯೂ ಜಾರಿಗೆ ತರಬೇಕು" ಎಂದು ಮನವಿ ಮಾಡಿದರು.

ಪಕ್ಷಿಪ್ರೇಮಿ ಶಿವು ಮಾತನಾಡಿ, "ಪಾರಿವಾಳಗಳ ಸಂಖ್ಯೆ ಹೆಚ್ಚಾದರೆ ಇತರೆ ಪಕ್ಷಿಗಳಿಗೆ ತೊಂದರೆಯಾಗುತ್ತದೆ. ಇದರಿಂದ ನಾವು ಪಾರಿವಾಳಗಳಿಗೆ ಆಹಾರ ಹಾಕದಿದ್ದರೆ ಅವು ಆಹಾರವನ್ನು ಹುಡುಕಿಕೊಂಡು ಹೋಗುತ್ತವೆ. ಸ್ವಾಭಾವಿಕವಾಗಿ ಅವುಗಳ ಸಂಖ್ಯೆ ಇರುತ್ತದೆ. ಅತಿಯಾಗಿ ಆಹಾರ ನೀಡಿದರೆ ಅವುಗಳೂ ಮತ್ತು ನಮಗೂ ತೊಂದರೆಯಾಗುತ್ತದೆ. ಅರಮನೆ ಅಂದವನ್ನು ಕಾಪಾಡಬೇಕು ಎಂದರೆ ಪಾರಿವಾಳಗಳಿಗೆ ಆಹಾರ ಹಾಕಬಾರದು" ಎಂದು ಹೇಳಿದರು.

ಪುರಾತತ್ವ ಇಲಾಖೆಯ ಆಯುಕ್ತ ದೇವರಾಜು ಮಾತನಾಡಿ, "ಅರಮನೆಯ ಬಲರಾಮ ದ್ವಾರದ ಬಳಿ ಪಾರಿವಾಳಗಳ ಸಂಖ್ಯೆ ಹೆಚ್ಚಾಗಿದೆ. ಇವುಗಳಿಗೆ ಸಾರ್ವಜನಿಕರು ಹೆಚ್ಚಾಗಿ ಆಹಾರ ಹಾಕುವುದರಿಂದ ಇಲ್ಲಿದೆ ಬರುತ್ತಿವೆ. ನಂತರ ಅರಮನೆಯ ಬಳಿ ಕುಳಿತು ಹಿಕ್ಕೆ ಹಾಕುತ್ತಿವೆ. ಇದರಿಂದ ಅರಮನೆಯ ಅಂದಕ್ಕೆ ಹಾನಿಯಾಗುತ್ತಿದೆ. ಈ ಸಂಬಂಧ ಪಾರಿವಾಳಗಳಿಗೆ ಆಹಾರ ಹಾಕದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಮೈಸೂರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿತ್ತು. ಅದರಂತೆ ಅವರು ಕ್ರಮಕ್ಕೆ ಸೂಚನೆ ನೀಡಿದ್ದಾರೆ" ಎಂದು ತಿಳಿಸಿದರು.

ಇದನ್ನೂ ಓದಿ:ಅರಮನೆ ಸಮೀಪ ಪಾರಿವಾಳಗಳಿಗೆ ಆಹಾರ ಹಾಕುವವರು ಎಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ ಸೂಚನೆ - Feeding Pigeons Near Mysuru Palace

ABOUT THE AUTHOR

...view details