ಬೆಂಗಳೂರು:ಸಾಧನೆಗೆ ಮಿತಿ ಎಂಬುದು ಇಲ್ಲ. ಪ್ರತಿನಿತ್ಯ ಹೊಸ ಕಲಿಕೆ ಸಾಧನೆಯಿಂದ ನಮ್ಮ ದೇಶವನ್ನು ಮುನ್ನಡೆಸಬೇಕೆಂದು ಯು.ಆರ್. ರಾವ್ ಉಪಗ್ರಹ ಕೇಂದ್ರದ ನಿರ್ದೇಶಕ, ಚಂದ್ರಯಾನ-3ರಲ್ಲಿ ಭಾಗಿಯಾಗಿರುವ ಇಸ್ರೋ ಹಿರಿಯ ವಿಜ್ಞಾನಿ ಎಂ. ಸಂಕರನ್ ತಿಳಿಸಿದರು.
ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ರಾಜ್ಯ ಜಲ ಸಂಪನ್ಮೂಲ ಇಲಾಖೆ, ರಾಷ್ಟ್ರೀಯ ಜಲ ವಿಜ್ಞಾನ ಯೋಜನೆ, ಭಾರತೀಯ ಜಲಸಂಪನ್ಮೂಲ ಪರಿಷತ್, ಭಾರತೀಯ ವಿಜ್ಞಾನ ಸಂಸ್ಥೆ ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ 'ರಾಷ್ಟ್ರೀಯ ಬಾಹ್ಯಾಕಾಶ ದಿನ'ದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಚಂದ್ರಯಾನ-3 ಯಶಸ್ವಿ ಉಡಾವಣೆಯು ಇಡೀ ದೇಶವೇ ಹೆಮ್ಮೆಪಡುವ ವಿಷಯ. ಅಷ್ಟಕ್ಕೇ ನಾವು ಸುಮ್ಮನಿರಬಾರದು. ಪ್ರತಿ ವರ್ಷವೂ ನಾವು ಏನಾದರೂ ಸಾಧನೆ ಮಾಡಬೇಕು. ಅದರಲ್ಲೂ ಯುವ ಜನರು ತಮ್ಮ ಗುರಿಯನ್ನು ಸಾಕಾರ ಮಾಡುವಲ್ಲಿ ಶ್ರಮಿಸಬೇಕು ಎಂದರು.
ಇಸ್ರೋ ಬಹಳಷ್ಟು ಸಾಧನೆ ಮಾಡಿದೆ. ಅದು ಏನು ಮಾಡಿದರೂ ಇಡೀ ಜಗತ್ತೇ ಗುರುತಿಸುತ್ತದೆ. ಭಾರತೀಯ ಬಾಹ್ಯಾಕಾಶದ ಪಿತಾಮಹ ಎಂದೇ ಹೆಸರಾಗಿರುವ ಡಾ. ವಿಕ್ರಮ ಸಾರಾಬಾಯಿ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಸ್ಥಾಪಕರು. ಮುಂದಿನ ವರ್ಷದ ವೇಳೆಗೆ ಅತ್ಯಂತ ದುಬಾರಿ ಉಪಗ್ರಹ ಎಂದೇ ಹೆಸರಾಗಿರುವ ನಿಸಾರ್ ಅನ್ನು ಇಸ್ರೋ - ನಾಸಾ ಜಂಟಿಯಾಗಿ ಅಭಿವೃದ್ಧಿಪಡಿಸಲಿದೆ. ಇದಕ್ಕೆ ಎರಡು ಬಿಲಿಯನ್ ಡಾಲರ್ ವೆಚ್ಚವಾಗಲಿದೆ. 2046ರ ವೇಳೆಗೆ ಚಂದ್ರಗ್ರಹದಲ್ಲಿ ಮಾನವ ಪ್ರವೇಶ ಮಾಡಿ ಮತ್ತು ಹೊರಬರಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುವುದು ಮುಂದಿನ ಗುರಿಗಳಲ್ಲಿ ಒಂದಾಗಿದೆ ಎಂದು ಅವರು ತಿಳಿಸಿದರು.