ಬಾಗಲಕೋಟೆ: ಈಗ ತಾನೇ ರಾಜಕೀಯಕ್ಕೆ ಬಂದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲರಿಗೆ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅವರು ಎಲ್ಲವನ್ನೂ ತಿಳಿದುಕೊಂಡು ಮಾತನಾಡಬೇಕು. ನಾನು ಯಾವುದೇ ಜಾತಿ ಮತ್ತು ಭೇದ ಭಾವ ಮಾಡಲು ಹೋಗಲ್ಲ. ಜಾತಿ ಆಧಾರದ ಮೇಲೆ ಗೆಲ್ಲಲು ಸಾಧ್ಯವಿಲ್ಲ. ಪಕ್ಷದ ತತ್ವ, ಸಿದ್ಧಾಂತ ಹಾಗೂ ಪ್ರಧಾನ ಮಂತ್ರಿ ಮೋದಿ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳು ಈ ಬಾರಿ ಮತ್ತೆ ನನಗೆ ಗೆಲುವು ತಂದುಕೊಡಲಿವೆ ಎಂದು ಪಿ.ಸಿ.ಗದ್ದಿಗೌಡರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಾಲ್ಕು ಬಾರಿ ಗೆದ್ದಿದ್ದೀರಿ, 5ನೇ ಬಾರಿಯ ಪ್ರಯತ್ನ ಹೇಗಿದೆ?:ಕ್ಷೇತ್ರದಲ್ಲಿ ಈಗಾಗಲೇ ನಮ್ಮ ಪ್ರಚಾರ ಕಾರ್ಯಕ್ರಮ ಆರಂಭವಾಗಿದೆ. ಲೋಕಸಭಾ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರದ ಮುಖಂಡರು ಹಾಗೂ ಸ್ಥಳೀಯರನ್ನು ಭೇಟಿ ಮಾಡಿದ್ದೇನೆ. ಎಲ್ಲರೂ ಒಗ್ಗಟ್ಟಾಗಿ ಗೆಲ್ಲಿಸಿಕೊಂಡು ಬರುವ ಭರವಸೆ ನೀಡಿದ್ದಾರೆ. ತೇರದಾಳ, ಜಮಖಂಡಿ, ನರಗುಂದ ಈ ಮೂರು ಕ್ಷೇತ್ರದಲ್ಲಿನ ಎಲ್ಲ ಹಳ್ಳಿಗಳಿಗೆ ಭೇಟಿ ನೀಡಿದ್ದೇನೆ. ಹೋದೆಲ್ಲೆಲ್ಲ ಎಲ್ಲರೂ ಉತ್ಸುಕತೆ ತೋರ್ಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನು ಮೆಚ್ಚಿಕೊಂಡಿದ್ದಾರೆ. ಅವರ ಮೇಲಿಟ್ಟಿರುವ ಪ್ರೀತಿ, ವಿಶ್ವಾಸ ಹಾಗೂ ದೃಢ ನಂಬಿಕೆ ನನ್ನನ್ನು ಗೆಲುವಿನ ದಡ ಸೇರಿಸಲಿದೆ.
4 ಬಾರಿ ಗೆದ್ದರೂ ಕ್ಷೇತ್ರ ಅಭಿವೃದ್ಧಿಯಾಗಿಲ್ಲ ಎಂಬ ಆರೋಪವಿದೆಯಲ್ಲ?:ಜಿಲ್ಲೆಗೆ ಏನು ಅಭಿವೃದ್ಧಿ ಮಾಡಬೇಕು, ಏನು ಮಾಡಿದ್ದೇನೆ ಅನ್ನೋದು ನನಗೆ ಗೊತ್ತಿದೆ. ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಅಭಿವೃದ್ಧಿ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಸಚಿವರು, ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಹತ್ತು ಹಲವು ಸುಧಾರಣಾ ಕಾರ್ಯಗಳನ್ನು ಮಾಡಿದ್ದೇನೆ. ಏನೆಲ್ಲ ಕೆಲಸ ಕಾರ್ಯಗಳನ್ನು ಮಾಡಿದ್ದೇನೆ ಎಂಬುದರ ಕುರಿತು ನನ್ನದೊಂದು ಕೈಪಿಡಿ ಬಿಡುಗಡೆಯಾಗಿದೆ. ಆರೋಪ ಮಾಡಿದವರಿಗೆ ಆ ಪ್ರತಿಯನ್ನು ಕಳಿಸಿಕೊಡುವೆ. ಆ ಮೂಲಕ ಮಾಹಿತಿ ಪಡೆದುಕೊಳ್ಳಲಿ.
ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್ ಸ್ಪರ್ಧೆಯಿಂದ ನಿಮಗೆ ಅನುಕೂಲವಾಯಿತೇ?:ಈ ಲೋಕಸಭೆ ಕ್ಷೇತ್ರದಿಂದ ಜನರು ನನ್ನನ್ನು ನಾಲ್ಕು ಬಾರಿ ಗೆಲ್ಲಿಸಿಕೊಂಡು ಬಂದಿದ್ದಾರೆ. ಇದು ನನ್ನ ಐದನೇ ಸ್ಪರ್ಧೆ. ಈವರೆಗೂ ನಾನು ನನ್ನ ಪ್ರತಿಸ್ಪರ್ಧಿ ಬಗ್ಗೆ ಯಾವತ್ತೂ ಯೋಚನೆ ಮಾಡಿಲ್ಲ, ಮುಂದೆಯೂ ಯೋಚನೆ ಮಾಡುವುದಿಲ್ಲ. ನಾನು ಮಾಡಿದ ಕೆಲಸ ನನ್ನನ್ನು ಕೈಹಿಡಿಯುತ್ತಿದೆ. ಇದನ್ನಷ್ಟೇ ನಾನು ನಂಬಿದ್ದೇನೆ.