ಬೆಂಗಳೂರು:ಮದ್ಯ ಸೇವಿಸಿ ಬಂದು ಗಲಾಟೆ ಮಾಡುತ್ತಿದ್ದ ಯುವಕನನ್ನು ಆತನ ಮಾಜಿ ಸಹೋದ್ಯೋಗಿಗಳೇ ಹತ್ಯೆಗೈದಿರುವ ಘಟನೆ ತಡರಾತ್ರಿ ಮೈಕೋ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಿಹಾರದ ಸುಜಿತ್ (34) ಹತ್ಯೆಯಾದ ಯುವಕ. ಕೊಲೆ ಆರೋಪಿಗಳಾದ ಸಂಜಯ್ (28) ಹಾಗೂ ಅಮನ್ ಕುಮಾರ್ (22) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಸುಜಿತ್, ಸಂಜಯ್ ಹಾಗೂ ಅಮನ್ ಕುಮಾರ್ ಮೈಕೋ ಲೇಔಟ್‌ನಲ್ಲಿರುವ ಫ್ಲೈವುಡ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಪಾನಮತ್ತನಾಗಿರುತ್ತಿದ್ದ ಸುಜಿತ್‌ನನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು. ಆದರೆ ಸುಜಿತ್ ಆಗಾಗ ಮದ್ಯ ಸೇವಿಸಿ ಅಂಗಡಿ ಮುಂದೆ ಬಂದು ಗಲಾಟೆ ಮಾಡುತ್ತಿದ್ದ. ಅದೇ ರೀತಿ ಗುರುವಾರ ರಾತ್ರಿ ಬಂದು ಗಲಾಟೆ ಮಾಡುತ್ತಿದ್ದಾಗ ಸಿಟ್ಟಿಗೆದ್ದ ಆರೋಪಿಗಳು ಮರದ ತುಂಡುಗಳಿಂದ ಹೊಡೆದು, ಕತ್ತು ಹಿಸುಕಿ ಹತ್ಯೆಗೈದಿದ್ದಾರೆ.