ಪುಟ್ಟ ಗ್ರಾಮದ ನಳಮಹರಾಜರ ಕಥೆ ಇದು ದಾವಣಗೆರೆ: ದಾವಣಗೆರೆ ಜಿಲ್ಲೆಯ ಪುಟ್ಟ ಗ್ರಾಮ ಕಿತ್ತೂರು. ಈ ಗ್ರಾಮದಲ್ಲಿರುವ ಪ್ರತಿಯೊಬ್ಬರು ಅಡುಗೆ ಭಟ್ಟರೇ. ದಾವಣಗೆರೆ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಈ ಗ್ರಾಮದ ಗ್ರಾಮಸ್ಥರು ಅಡುಗೆ ಕೆಲಸದಿಂದಲೇ ಬದುಕು ಕಟ್ಟಿಕೊಂಡಿದ್ದಾರೆ. ಗ್ರಾಮದ ಪ್ರತಿ ಮನೆಯ ಸದಸ್ಯರಲ್ಲಿ ಒಬ್ಬರು ಅಡುಗೆ ಕೆಲಸಗಾರರು, ಅಡುಗೆ ಕಾಂಟ್ರ್ಯಾಕ್ಟರ್ ಅಥವಾ ಇನ್ನು ಕೆಲವರು ಅಡುಗೆ ಭಟ್ಟರಾಗಿದ್ದಾರೆ. ಈ ಗ್ರಾಮದಲ್ಲಿರುವ ರೈತರು, ವಿಲಕಚೇತನರು ಕೂಡ ಅಡುಗೆ ಭಟ್ಟರಾಗಿರುವುದು ಇನ್ನೂ ವಿಶೇಷ.
ಈ ಗ್ರಾಮದ ಬಹುತೇಕರಿಗೆ ಜೀವನ, ಜೀವನವನ್ನು ಕಟ್ಟಿಕೊಟ್ಟಿದ್ದು, ಈ ಅಡುಗೆ ಕೆಲಸವೇ. ಅಡುಗೆ ಕೆಲಸ ಮಾಡುತ್ತಲೇ ಈ ಗ್ರಾಮದ ಅದೆಷ್ಟೋ ಯುವಕರು ಸರ್ಕಾರಿ ನೌಕರಿ, ವಕೀಲ, ಉಪನ್ಯಾಸಕ ವೃತ್ತಿಗಳನ್ನು ಪಡೆದಿದ್ದಾರೆ. ದೂರದ ಊರುಗಳಲ್ಲಿ ಅಡುಗೆ ಕೆಲಸ ಮಾಡುತ್ತಲೇ, ವ್ಯಾಸಂಗವನ್ನೂ ಮುದುವರಿಸುತ್ತಾ, ಉತ್ತಮ ಹುದ್ದೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಗ್ರಾಮದ ಅಡುಗೆ ಭಟ್ಟರು ಇಡೀ ಭಾರತದಾದ್ಯಂತ ತಮ್ಮ ನಳಪಾಕದ ಕೈಚಳಕ ತೋರಿದ್ದಾರೆ. ಹರಜಾತ್ರೆ, ಕನ್ನಡ ಸಾಹಿತ್ಯ ಸಮ್ಮೇಳನ, ಮಠಗಳಲ್ಲಿ ಅಡುಗೆ ಮಾಡಿರುವ ಖ್ಯಾತಿಯನ್ನು ಕಿತ್ತೂರಿನ ಅಡುಗೆ ಭಟ್ಟರು ಗಳಿಸಿದ್ದಾರೆ.
ಗ್ರಾಮದಲ್ಲಿ ಅಡುಗೆ ಕಾಯಕ ಹುಟ್ಟಿಕೊಂಡಿದ್ದು ಹೇಗೆ?:ಅಡುಗೆ ಕೆಲಸಗಾರಮಹಾಂತೇಶ್ ಅವರು ಮಾತನಾಡಿ, "ನಾಗಣ್ಣ ಎಂಬುವರು ಈ ಕಾಯಕವನ್ನು 30 ವರ್ಷಗಳ ಹಿಂದೆ ಗ್ರಾಮದಲ್ಲಿ ಆರಂಭಿಸಿದ್ದರು. ಇದೀಗ ಆ ಕಾಯಕ ಹೆಮ್ಮರವಾಗಿ ಬೆಳೆದಿದೆ. ಹಂತ ಹಂತವಾಗಿ ಅಡುಗೆ ಕಾಂಟ್ರ್ಯಾಕ್ಟರ್, ಅಡುಗೆ ಭಟ್ಟರ ಸಂಖ್ಯೆ ಗಣನೀಯವಾಗಿ ಏರಿಕೆ ಆಯಿತು. ಹರ ಜಾತ್ರೆ, ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಈ ಗ್ರಾಮಸ್ಥರು ನಳಪಾಕರಾಗಿದ್ದರು. ಈ ಗ್ರಾಮದಲ್ಲಿ 400 ಜನ ಅಡುಗೆ ಕೆಲಸ ಮಾಡುತ್ತಿದ್ದಾರೆ" ಎಂದು ಮಾಹಿತಿ ನೀಡಿದರು.
ಕಿತ್ತೂರಿನಲ್ಲಿದ್ದಾರೆ ಮನೆಗೊಬ್ಬರು ಅಡುಗೆ ಭಟ್ಟರು ಕಿತ್ತೂರಿನ ಗ್ರಾಮಸ್ಥ ವೀರೇಶ್ ಪ್ರತಿಕ್ರಿಯಿಸಿ, "ಮನೆಗೊಬ್ಬರು ಅಡುಗೆ ಕಾಂಟ್ರ್ಯಾಕ್ಟರ್ ಇದ್ದಾರೆ. ವ್ಯಾಸಂಗ ಮಾಡುತ್ತಾ ಅಡುಗೆ ಕೆಲಸ ಮಾಡುತ್ತಿರುವವರ ಸಂಖ್ಯೆ ಹೆಚ್ಚಿದೆ. ಅಡುಗೆ ಕೆಲಸ ಅವರ ಜೀವನಾಂಶವಾಗಿದೆ. ಇದರಿಂದಲೇ ಜನ ಬದುಕು ಕಟ್ಟಿಕೊಂಡಿದ್ದಾರೆ. ವಿಕಲಾಂಗರು, ರೈತರು ಕೂಡ ಇದೇ ಉದ್ಯೋಗ ಮಾಡುತ್ತಿದ್ದಾರೆ. ಇಲ್ಲಿನ ಅಡುಗೆ ಭಟ್ಟರು ಮಹಾರಾಷ್ಟ್ರ, ದೆಹಲಿ, ಕೇರಳದಲ್ಲೂ ಕೆಲಸ ಮಾಡಿದ್ದಾರೆ. ಈ ಅಡುಗೆ ಕೆಲಸ ಮಾಡುತ್ತಾ ಶಿಕ್ಷಕರು, ಪೊಲೀಸರು, ವಕೀಲರು, ಉಪನ್ಯಾಸಕರು, ಮುಂತಾದ ಇಲಾಖೆಗಳಲ್ಲಿ ಇಲ್ಲಿನವರು ಕೆಲಸ ಮಾಡುತ್ತಿದ್ದಾರೆ. ಇನ್ನೂ ಕೆಲವು ಯುವಕರು ಯುವಕರು ಐಎಎಸ್ ಐಪಿಎಸ್, ಯುಪಿಎಸ್ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದಾರೆ" ಎಂದು ಹೇಳಿದರು.
ಇದನ್ನೂ ಓದಿ:ಚಳಿಗಾಲದಲ್ಲಿ ಅಡುಗೆ ಮನೆಯೇ ಔಷಧಾಲಯ; ಕೆಮ್ಮು- ನೆಗಡಿಗೆ ಅಲ್ಲೇ ಇದೆ ಮದ್ದು