ಬೆಳಗಾವಿ: ಸಾರ್ವಜನಿಕರು, ಕನ್ನಡಪರ ಸಂಘಟನೆಗಳ ಬೇಡಿಕೆಯಂತೆ ಗಡಿ ಹಾಗೂ ನದಿಗಳ ರಕ್ಷಣೆಗೆ ಸಂಬಂಧಿಸಿದಂತೆ ಸ್ಥಳೀಯ ಸಮಸ್ಯೆಗಳು ಮತ್ತು ಅಹವಾಲುಗಳನ್ನು ಸ್ವೀಕರಿಸಲು ಅನುಕೂಲವಾಗುವಂತೆ ಗಡಿ ಆಯೋಗದ ಕಚೇರಿಯೊಂದನ್ನು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸ್ಥಾಪಿಸಲಾಗುವುದು ಎಂದು ಕರ್ನಾಟಕ ಗಡಿ ಮತ್ತು ನದಿಗಳ ಸಂರಕ್ಷಣಾ ಆಯೋಗದ ಅಧ್ಯಕ್ಷರಾದ ಶಿವರಾಜ್ ಪಾಟೀಲ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಕರ್ನಾಟಕ ಗಡಿ ಮತ್ತು ನದಿಗಳ ರಕ್ಷಣಾ ಆಯೋಗದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗಡಿ ಮತ್ತು ನದಿಗಳ ಆಯೋಗಕ್ಕೆ ಸುವರ್ಣ ವಿಧಾನಸೌಧದಲ್ಲಿ ಎರಡು ಕೊಠಡಿಗಳನ್ನು ನೀಡುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಸದರಿ ಆಯೋಗವನ್ನು ಪುನರ್ ರಚನೆಗೆ ಕ್ರಮ ಕೈಗೊಂಡು ಶೀಘ್ರವೇ ಸುವರ್ಣ ಸೌಧದಲ್ಲಿ ಕಚೇರಿ ಸ್ಥಾಪಿಸಿ ಕಚೇರಿಗೆ ಆಯೋಗದ ಸ್ಥಳೀಯ ಸದಸ್ಯರೊಬ್ಬರನ್ನು ನಿಯೋಜಿಸುವ ಮೂಲಕ ಸ್ಥಳೀಯ ಗಡಿ ಹಾಗೂ ನದಿಗಳ ರಕ್ಷಣೆಗೆ ಸಂಬಂಧಿಸಿದಂತೆ ಜನರ, ಸಂಘ - ಸಂಸ್ಥೆಗಳ ಅಹವಾಲುಗಳನ್ನು ಸ್ವೀಕರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಗಡಿ ಸಮಸ್ಯೆಗಳನ್ನು ಸಂವಿಧಾನಾತ್ಮಕವಾಗಿ ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಿರಂತರವಾಗಿ ನಡೆದಿರುತ್ತವೆ. ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಕರಣ ಪಟ್ಟಿಯಾದ ಬಳಿಕ ಸಮರ್ಥವಾಗಿ ವಾದ ಮಂಡನೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಗಡಿ ಸಮಸ್ಯೆಗಳನ್ನು ಸಂವಿಧಾನಾತ್ಮಕವಾಗಿ ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಿರಂತರವಾಗಿ ನಡೆದಿರುತ್ತವೆ. ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಕರಣ ಪಟ್ಟಿಯಾದ ಬಳಿಕ ಸಮರ್ಥವಾಗಿ ವಾದ ಮಂಡನೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಕಾನೂನಾತ್ಮಕ ಹಾಗೂ ರಾಜಕೀಯವಾಗಿ ಹೋರಾಟಕ್ಕೆ ಸಂಬಂಧಿಸಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳ ಸಲಹೆಗಳು ಮತ್ತು ಹಕ್ಕೊತ್ತಾಯಗಳನ್ನು ಸರ್ಕಾರದ ಗಮನಕ್ಕೆ ತರುವ ಮೂಲಕ ರಚನಾತ್ಮಕ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದು. ಮಹಾರಾಷ್ಟ್ರ ಮಾದರಿಯಲ್ಲಿ ಗಡಿ ಸಚಿವರನ್ನು ನೇಮಕ ಮಾಡುವ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಶಿವರಾಜ್ ಪಾಟೀಲ ಭರವಸೆ ನೀಡಿದರು.
ನದಿಗಳು ಮತ್ತು ಗಡಿಗಳ ಸಮಸ್ಯೆ ಎದುರಾದಾಗ ಕಾನೂನಾತ್ಮಕವಾಗಿ ಯಾವ ರೀತಿಯಲ್ಲಿ ರಕ್ಷಣೆ ಮಾಡಬೇಕು ಎಂಬುದನ್ನು ಸರ್ಕಾರಕ್ಕೆ ಸಲಹೆ ರೂಪದಲ್ಲಿ ವರದಿ ನೀಡುವ ಕೆಲಸವನ್ನು ಆಯೋಗ ಮಾಡಲಿದೆ ಎಂದು ಶಿವರಾಜ ಪಾಟೀಲ ಹೇಳಿದರು. ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ರಾಜ್ಯೋತ್ಸವ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಆಚರಿಸಲು ಸರ್ಕಾರದಿಂದ ಹೆಚ್ಚಿನ ಅನುದಾನ ದೊರಕಿಸಲು ಶಿಫಾರಸು ಮಾಡಲಾಗುವುದು ಎಂದು ಶಿವರಾಜ್ ಪಾಟೀಲ ತಿಳಿಸಿದರು.