ಮೈಸೂರು/ಬೆಂಗಳೂರು: ಪಂಚೆ ಧರಿಸಿ ಬಂದಿದ್ದಕ್ಕೆ ರೈತನನ್ನು ಜಿಟಿ ಮಾಲ್ ಒಳಗೆ ಬಿಡದೇ ಸಿಬ್ಬಂದಿ ದರ್ಪ ತೋರಿದ ಘಟನೆ ಮಂಗಳವಾರ ನಡೆದಿತ್ತು. ಘಟನೆ ಬೆಳಕಿಗೆ ಬರುತ್ತಿದ್ದಂತೆ, ಮಾಲ್ ಸಿಬ್ಬಂದಿ, ಆಡಳಿತದ ವಿರುದ್ಧ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಮಾಲ್ ಮಾಲೀಕರು ರೈತನಿಗೆ ಕ್ಷಮೆಯಾಚಿಸಬೇಕು ಎಂಬ ಆಗ್ರಹವೂ ಕೇಳಿ ಬಂದಿತ್ತು. ಅದಲ್ಲದೇ ಘಟನೆಯನ್ನು ಖಂಡಿಸಿ, ಇಂದು ಕನ್ನಡಪರ ಹೋರಾಟಗಾರರು, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಇದೀಗ ಮಾಲ್ ಸಿಬ್ಬಂದಿ ಕ್ಷಮೆಯಾಚಿಸಿದ ಬಳಿಕ ಚಂದ್ರಶೇಖರ್ ಅವರು ಪ್ರತಿಭಟನೆ ಹಿಂಪಡೆದಿದ್ದಾರೆ.
ರೈತನಿಗೆ ಸನ್ಮಾನ:ಪ್ರತಿಭಟನೆ ಬೆನ್ನಲ್ಲೇ ಮಾಲ್ ಸಿಬ್ಬಂದಿ, ತಾವು ಮಾಡಿದ್ದು ತಪ್ಪು ಅಂತಾ ಒಪ್ಪಿಕೊಂಡು, ಪಂಚೆಯಲ್ಲೇ ಬಂದ ರೈತ ಫಕೀರಪ್ಪ ಅವರಿಗೆ ಆಡಳಿತಾಧಿಕಾರಿಗಳು ಒಳಗಡೆ ಕರೆಯಿಸಿ ಸನ್ಮಾನಿಸಿ, ಕ್ಷಮೆಯಾಚಿಸಿದ್ದಾರೆ. ಪ್ರತಿಭಟನೆ ಸಂದರ್ಭದಲ್ಲಿ ಲುಂಗಿಯುಟ್ಟ ವೃದ್ಧರೊಬ್ಬರು ಮಾಲ್ ಒಳಗೆ ಹೋಗಿದ್ದು, ಸಿಬ್ಬಂದಿಯು ಅವರಿಗೆ ಕೈಮುಗಿದು, ಸೆಕ್ಯೂರಿಟಿ ಚೆಕ್ ಕೂಡ ಮಾಡದೇ ಒಳಬಿಟ್ಟಿದ್ದಾರೆ.
ಕ್ಷಮೆ ಕೇಳಿದ ಸೆಕ್ಯೂರಿಟಿ:ರೈತನನ್ನು ತಡೆದ ಸೆಕ್ಯೂರಿಟಿ ಸಿಬ್ಬಂದಿ ಕೂಡ ಕ್ಷಮೆಯಾಚಿಸಿದ್ದಾರೆ. ''ನಿನ್ನೆ ಮಧ್ಯಾಹ್ನ ವ್ಯಕ್ತಿಯೊಬ್ಬರು ಪಂಚೆಯಲ್ಲಿ ಮಾಲ್‌ಗೆ ಬಂದಿದ್ದರು. ಪಂಚೆಯನ್ನು ಮೊಣಕಾಲಿನ ತನಕ ಧರಿಸಿ ನಿಂತಿದ್ದರು. ಕೆಳಗಿನ ಮಹಡಿಯಲ್ಲಿ ಹುಟ್ಟುಹಬ್ಬದ ಕಾರ್ಯಕ್ರಮ ನಡೆಯುತ್ತಿತ್ತು. ವಿಚಾರವನ್ನು ಮ್ಯಾನೇಜ್ಮೆಂಟ್ ಗಮನಕ್ಕೆ ತರಲಾಗಿತ್ತು. ಸಂಜೆ ಮತ್ತೆ ರೈತರೊಬ್ಬರು ಪಂಚೆ ಧರಿಸಿ ಬಂದಿದ್ದರು. ಈ ಸಮಯದಲ್ಲಿ ನಾವು ತಡೆದು, ಮ್ಯಾನೇಜ್ಮೆಂಟ್ ಗಮನಕ್ಕೆ ತಂದಿದ್ದೆವು. ಆದರೆ, ಉದ್ದೇಶಪೂರ್ವಕವಾಗಿ ತಡೆದಿಲ್ಲ. ಮ್ಯಾನೇಜ್ಮೆಂಟ್ನಿಂದ ಉತ್ತರ ಬರುವ ತನಕ ಕಾಯಿಸಿದ್ದೆವಷ್ಟೇ'' ಎಂದು ಸೆಕ್ಯೂರಿಟಿ ಅರುಣ್ ಸ್ಪಷ್ಟನೆ ನೀಡಿದ್ದಾರೆ.
ಘಟನೆಯ ವಿವರ:ಹಾವೇರಿ ಮೂಲದ ನಾಗರಾಜ್ ಎನ್ನುವರು ಜುಲೈ 16ರಂದು ತಮ್ಮ ತಂದೆ - ತಾಯಿಗೆ ಸಿನಿಮಾ ತೋರಿಸಲು ಬೆಂಗಳೂರಿನ ಮಾಗಡಿ ರಸ್ತೆ ಜಿಟಿ ಮಾಲ್ ಕರೆದೊಯ್ದಿದ್ದಾರೆ. ಆದರೆ, ನಾಗರಾಜ್ ತಂದೆ ಪಂಚೆ ಹಾಕಿಕೊಂಡು ತಲೆಗೆ ಪಟಗ ಸುತ್ತಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಸಿಬ್ಬಂದಿ ಅವರನ್ನು ಮಾಲ್ ಒಳಗೆ ಪ್ರವೇಶಿಸಲು ನಿರಾಕರಿಸಿದ್ದರು. ಒಳಗೆ ಬಿಡಿ ಎಂದು ಪುತ್ರ ನಾಗರಾಜ್ ಎಷ್ಟು ಬಾರಿ ಕೇಳಿದರೂ, 'ಪಂಚೆ ಹಾಕೊಂಡಿದ್ದಾರೆ, ಮಾಲ್‌ನಲ್ಲಿ ಪಂಚೆ ಹಾಕಿದವರನ್ನು ಬಿಡುವುದಿಲ್ಲ' ಎಂದು ಸಿಬ್ಬಂದಿ ನಿರಾಕರಿಸಿದ್ದರು. ಇದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಅಸಮಾಧಾನಕ್ಕೆ ಕಾರಣವಾಗಿತ್ತು.