ಹಾಸನ:ಕೌಟುಂಬಿಕ ಕಲಹದಿಂದ ಬೇಸತ್ತು ಇಂಜಿನಿಯರ್ವೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಶೆಟ್ಟಿಹಳ್ಳಿ ಬಳಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇಂದಿರಾನಗರ ಬಡಾವಣೆ ನಿವಾಸಿ ಜಿ. ಜೆ. ಪ್ರಮೋದ್ (35) ಆತ್ಮಹತ್ಯೆ ಮಾಡಿಕೊಂಡ ಇಂಜಿನಿಯರ್.
ತಮ್ಮ ಪುತ್ರ ಪ್ರಮೋದ್ ಹಾಗೂ ಆತನ ಪತ್ನಿ ನಂದಿನಿ ನಡುವೆ ಆಗಾಗ್ಗೆ ಸಣ್ಣಪುಟ್ಟ ಜಗಳವಾಗುತ್ತಿತ್ತು. ಜೊತೆಗೆ, ಆಕೆಯ ಸಂಬಂಧಿಕರು ಅವನಿಗೆ ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸತ್ತು ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತ ಪ್ರಮೋದ್ ಕುಟುಂಬಸ್ಥರು ಆರೋಪಿಸಿದ್ದಾರೆ.
ನನ್ನ ಮಗ ಬಿಇ ಓದಿದ್ದು, ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ಆತನಿಗೆ ಮದುವೆ ಮಾಡಿ 7 ವರ್ಷವಾಯ್ತು. ಮದುವೆಯಾದ ದಿನದಿಂದ ನಮ್ಮ ಸೊಸೆ ಮನೆಗೆ ಬಂದಿಲ್ಲ. ಅವನ ಮನೆಯಲ್ಲಿ ನಡೆಯುತ್ತಿದ್ದ ಸಂಸಾರದ ಕಲಹವನ್ನು ಮರ್ಯಾದೆಗೆ ಅಂಜಿ ನಮ್ಮ ಬಳಿ ಮಗ ಪ್ರಸ್ತಾಪಿಸುತ್ತಿರಲಿಲ್ಲ. ಮದುವೆಯಾದ 2ನೇ ವರ್ಷಕ್ಕೆ ನನ್ನ ಮಗನ ಮೇಲೆ ಹಲ್ಲೆ ಮಾಡಿ, ಖಾಲಿ ಪೇಪರ್ಗೆ ಸಹಿ ಹಾಕಿಸಿಕೊಂಡಿದ್ದರು. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದೆವು. ಆಕೆ ಸಣ್ಣಪುಟ್ಟ ಕಾರಣಕ್ಕೆ ನನ್ನ ಮಗನ ಜೊತೆ ಸೊಸೆ ಜಗಳ ಮಾಡುತ್ತಿದ್ದಳು. ಇದರಿಂದ ಬೇಸತ್ತು ನನ್ನ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತ ಪ್ರಮೋದ್ ತಂದೆ ಜಗದೀಶ್ ಆರೋಪ ಮಾಡಿದ್ದಾರೆ.
ಪ್ರಕರಣ ಹಿನ್ನೆಲೆ : ಡಿ.29ರಂದು ಮನೆಯಲ್ಲಿಯೇ ಮೊಬೈಲ್ ಬಿಟ್ಟು ಹೊರ ಹೋಗಿದ್ದ ಪ್ರಮೋದ್, ತಡರಾತ್ರಿಯಾದರೂ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಎಲ್ಲಾ ಕಡೆ ಹುಡುಕಾಟ ನಡೆಸಿದ ಬಳಿಕ ಆತನ ಸುಳಿವು ಸಿಗದ ಕಾರಣ ನಗರದ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ಮೂರು ದಿನದಿಂದ ಒಂದೇ ಜಾಗದಲ್ಲಿ ನಿಂತಿದ್ದ ದ್ವಿಚಕ್ರ ವಾಹನವನ್ನು ಕಂಡ ರಾಮೇನಹಳ್ಳಿಯ ಗ್ರಾಮಸ್ಥರು, ವಾಹನದ ಡ್ಯಾಸ್ ಬೋರ್ಡ್ ತೆಗೆದು ಯಾರದೆಂದು ನೋಡಿದ್ದರು. ನಂತರ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಇದು ಕಾಣೆಯಾದ ಪ್ರಮೋದ್ ಬೈಕ್ ಎಂಬುದನ್ನು ತಿಳಿದು ಪೊಲೀಸರು ಆತನ ಪೋಷಕರಿಗೆ ತಿಳಿಸಿದ್ದರು. ಬೈಕ್ ಬಿಟ್ಟು ನದಿಗೆ ಹಾರಿರುವ ಅನುಮಾನ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಲಾಗಿತ್ತು. ಬುಧವಾರ ಬೆಳಗ್ಗೆ ನದಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಅಗ್ನಿಶಾಮಕ ದಳದವರು ಮೃತದೇಹವನ್ನು ನದಿಯಿಂದ ಹೊರತೆಗೆದಿದ್ದಾರೆ.