ಶಿವಮೊಗ್ಗ: ಇಂಜಿನಿಯರೊಬ್ಬರ ಮನೆಯ ಕಾಂಪೌಂಡ್ ಒಳಗೆ ಗಾಂಜಾ ಎಸೆದ ಪ್ರಕರಣದಲ್ಲಿ KPTCL ಇಂಜಿನಿಯರ್ ಪೊಲೀಸರ ಅತಿಥಿಯಾಗಿರುವ ಘಟನೆ ಸಾಗರದಲ್ಲಿ ನಡೆದಿದೆ. ಶಾಂತಕುಮಾರ ಸ್ವಾಮಿ ಬಂಧಿತ ಇಂಜಿನಿಯರ್.
ಸಾಗರ ಗ್ರಾಮಾಂತರ ಠಾಣೆ ವ್ಯಾಪ್ತಿಯ ಹುಲ್ಲತ್ತಿ ಗ್ರಾಮದ ನಿವಾಸಿ ಸಿವಿಲ್ ಇಂಜಿನಿಯರ್ ಜಿತೇಂದ್ರ ಈ ಕುರಿತು ದೂರು ನೀಡಿದ್ದರು. ತಮ್ಮ ಮನೆಯ ಕಾಂಪೌಂಡ್ ಒಳಗೆ ಯಾರೋ ಒಬ್ಬರು ಜುಲೈ 13 ರಂದು ರಾತ್ರಿ ಗಾಂಜಾ ಪ್ಯಾಕೆಟ್ಗಳನ್ನು ಹಾಕಿದ್ದರು. ಸಿಸಿಟಿವಿ ಪರಿಶೀಲಿಸಿ ನೋಡಿದಾಗ ಕಪ್ಪು ಬಣ್ಣದ ಪ್ಲಾಸ್ಟಿಕ್ ಕವರ್ವೊಂದನ್ನು ಎಸೆದಿರುವುದು ಕಂಡುಬಂದಿತ್ತು ಎಂದು ದೂರಿನಲ್ಲಿ ಹೇಳಿದ್ದರು. ಅಲ್ಲದೆ, ಸಂಬಂಧಿಕರೊಂದಿಗಿನ ಮದುವೆ ಹೊಂದಾಣಿಕೆ ಆಗದ ಹಿನ್ನೆಲೆಯಲ್ಲಿ ಶಾಂತಕುಮಾರ್ ಸ್ವಾಮಿ ಗಾಂಜಾ ಕೇಸ್ ಹಾಕುವ ಉದ್ದೇಶದಿಂದ ವ್ಯಕ್ತಿಯೊಬ್ಬನನ್ನು ಕಳುಹಿಸಿ ಈ ಕೃತ್ಯ ಎಸಗಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ಈ ಕುರಿತಂತೆ ರಚಿಸಲಾಗಿದ್ದ ವಿಶೇಷ ತಂಡ ಪ್ರಕರಣದ ಜಾಡನ್ನು ಪತ್ತೆ ಹಚ್ಚಿ ಪ್ರಮುಖ ಆರೋಪಿ ಶಾಂತಕುಮಾರ್ ಹಾಗೂ ಇನ್ನೋರ್ವ ಆರೋಪಿ ಸನಾವುಲ್ಲಾ ಅವರನ್ನು ಬಂಧಿಸಿರುವುದಾಗಿ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.