ಬೆಂಗಳೂರು:ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ತಾರಕಕ್ಕೇರಿದ್ದು, ಪೂರೈಕೆಗೆ ರಾಜ್ಯ ಸರ್ಕಾರ ನಾನಾ ಕಸರತ್ತು ಮಾಡುತ್ತಿದೆ. ಸದ್ಯ ಇಂಧನ ಇಲಾಖೆ ಸೆಕ್ಷನ್ 11ರಡಿ ವಿದ್ಯುತ್ ಖರೀದಿ ಹಾಗೂ ನವೀಕರಿಸಬಹುದಾದ ವಿದ್ಯುತ್ ಮೂಲಕ ರಾಜ್ಯದಲ್ಲಿನ ಕೊರತೆ ನೀಗಿಸುವ ಕೆಲಸ ಮಾಡುತ್ತಿದೆ.
ರಾಜ್ಯದಲ್ಲಿನ ಭೀಕರ ಬರಗಾಲ ಹಾಗೂ ಏರುತ್ತಿರುವ ತಾಪಮಾನದಿಂದಾಗಿ ವಿದ್ಯುತ್ ಬಳಕೆಯೂ ಗಗನಕ್ಕೇರಿದೆ. ಹೀಗಾಗಿ, ವಿದ್ಯುತ್ ಬೇಡಿಕೆ ಉಲ್ಬಣಗೊಂಡಿದೆ. ಗ್ರಾಮೀಣ ಪ್ರದೇಶಗಳಲ್ಲಿ ಅನಿಯಮಿತ ವಿದ್ಯುತ್ ಕಣ್ಣಾಮುಚ್ಚಾಲೆಯೂ ನಡೆಯುತ್ತಿದೆ. ಇತ್ತ ಮಳೆ ಕೊರತೆಯೂ ಇಂಧನ ಇಲಾಖೆಯ ಸಂಕಷ್ಟವನ್ನು ಇನ್ನಷ್ಟು ಹೆಚ್ಚಿಸಿದೆ. ಸದ್ಯ ರಾಜ್ಯದ ಕೆಲವೆಡೆ ಮಳೆ ಬರುತ್ತಿದ್ದು, ವಿದ್ಯುತ್ ಬೇಡಿಕೆಯಲ್ಲಿ ಸ್ವಲ್ಪ ಇಳಿಕೆಯಾಗಿದೆ.
ಇಂಧನ ಇಲಾಖೆಯು ರಾಜ್ಯದಲ್ಲಿನ ವಿದ್ಯುತ್ ಕೊರತೆ ನೀಗಿಸಲು ವಿದ್ಯುತ್ ಖರೀದಿ, ನವೀಕರಿಸಬಹುದಾದ ವಿದ್ಯುತ್ ಮೂಲ, ಸೆಕ್ಷನ್ 11 ಕಾಯ್ದೆ ವಿಧಿಸುವ ಮೂಲಕ ರಾಜ್ಯದ ಜನರ ವಿದ್ಯುತ್ ಬೇಡಿಕೆ ಈಡೇರಿಸುವ ಪ್ರಯತ್ನ ಮಾಡುತ್ತಿದೆ. ಮೇ ತಿಂಗಳ ಅಂತ್ಯದವರೆಗೆ ಇಂಧನ ಇಲಾಖೆ ವಿದ್ಯುತ್ ನಿರ್ವಹಣೆಯ ಪ್ಲಾನ್ ಮಾಡಿದ್ದು, ಜೂನ್ನಲ್ಲಿ ಮುಂಗಾರು ಆರಂಭದ ನಿರೀಕ್ಷೆಯಲ್ಲಿದೆ. ಬಳಿಕ ಇಂಧನ ಇಲಾಖೆ ಮೇಲಿನ ಬೇಡಿಕೆ-ಪೂರೈಕೆ ನಿರ್ವಹಣೆಯ ಒತ್ತಡ ಕಡಿಮೆಯಾಗುವ ವಿಶ್ವಾಸದಲ್ಲಿದ್ದಾರೆ ಇಂಧನ ಇಲಾಖೆ ಅಧಿಕಾರಿಗಳು.
ಸೆಕ್ಷನ್ 11ರಡಿ ವಿದ್ಯುತ್ ಖರೀದಿ: ತೀವ್ರ ಕೊರತೆ ನೀಗಿಸಲು ರಾಜ್ಯ ಸರ್ಕಾರ ವಿದ್ಯುಚ್ಛಕ್ತಿ ಕಾಯ್ದೆ ಸೆಕ್ಷನ್ 11ರ ಅಸ್ತ್ರ ಬಳಸಿದೆ. ಅದರಂತೆ ರಾಜ್ಯದ ಖಾಸಗಿ ವಿದ್ಯುತ್ ಉತ್ಪಾದಕರು ಬೇರೆ ರಾಜ್ಯಗಳಿಗೆ ವಿದ್ಯುತ್ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಅದರಂತೆ, ರಾಜ್ಯದ ಎಲ್ಲಾ ವಿದ್ಯುತ್ ಉತ್ಪಾದಕರು ವಿದ್ಯುತ್ಅನ್ನು ರಾಜ್ಯದ ವಿದ್ಯುತ್ ಸರಬರಾಜುದಾರರಿಗೇ ಮಾರಾಟ ಮಾಡಬೇಕು.
ಖಾಸಗಿ ಉತ್ಪಾದಕರು ನೀಡುವ ಪ್ರತಿ ಯೂನಿಟ್‌ಗೆ ಸಾಗಣೆ ಮತ್ತು ಇತರ ವೆಚ್ಚ ಹೊರತುಪಡಿಸಿ ಪ್ರತಿ ಯೂನಿಟ್‌ಗೆ 4.86 ರೂ. ದರ ನಿಗದಿ ಮಾಡಲು ಆದೇಶದಲ್ಲಿ ಸರ್ಕಾರ ಪ್ರಸ್ತಾಪಿಸಿದೆ. ಕೇಂದ್ರೀಯ ವಿದ್ಯುತ್ ವಿನಿಮಯದ ದರ, ಕಳೆದ ಆರು ಅವಧಿಯಲ್ಲಿನ ಅಲ್ಪಾವಧಿ ಖರೀದಿ ಒಪ್ಪಂದದ ದರಗಳನ್ನು ಪರಿಗಣಿಸಿ ಸರ್ಕಾರ ಈ ದರ ನಿಗದಿ ಮಾಡಿದೆ. ಅದರಂತೆ ಪ್ರಸ್ತುತ ರಾಜ್ಯ 200-300 ಮೆಗಾ ವ್ಯಾಟ್ ವಿದ್ಯುತ್ ಪಡೆಯುತ್ತಿದೆ ಎಂದು ಇಂಧನ ಇಲಾಖೆ ತಿಳಿಸಿದೆ.