ಬೆಳಗಾವಿ: ಭ್ರೂಣ ಪತ್ತೆ ಮಾಡುತ್ತಿದ್ದ ಆಸ್ಪತ್ರೆ ಮೇಲೆ ಆರೋಗ್ಯ ಅಧಿಕಾರಿಗಳು ದಾಳಿ ಮಾಡಿರುವ ಘಟನೆ ಗೋಕಾಕ್ ನಗರದಲ್ಲಿ ನಡೆದಿದೆ. ಗೋಕಾಕಿನಲ್ಲಿರುವ ಇಕ್ರಾ ಆಸ್ಪತ್ರೆ ಮೇಲೆ ಕೆಪಿಎಂಇ ಡೆಪ್ಯೂಟಿ ಡೈರೆಕ್ಟರ್ ಡಾ. ವಿವೇಕ ದೊರೆ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಬೆಂಗಳೂರು ಅಧಿಕಾರಿಗಳಿಗೆ ಬೆಳಗಾವಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಹೇಶ ಕೋಣಿ ಸೇರಿ ತಾಲೂಕು ಆರೋಗ್ಯಾಧಿಕಾರಿ ಸಾಥ್ ನೀಡಿದ್ದಾರೆ.
ಏಜೆಂಟರ ಮೂಲಕ ಹಣ ಪಡೆದು ಇಲ್ಲಿನ ವೈದ್ಯರು ಭ್ರೂಣ ಪತ್ತೆ ಮಾಡುತ್ತಿದ್ದರು. ಏಜೆಂಟ್ ಮೂಲಕ ಹಣ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಅಧಿಕಾರಿಗಳ ಕೈಗೆ ವೈದ್ಯರೊಬ್ಬರು ಸಿಕ್ಕಿ ಹಾಕಿಕೊಂಡಿದ್ದಾರೆ. 80 ಸಾವಿರ ರೂ. ಪಡೆಯುತ್ತಿದ್ದಾಗ ವೈದ್ಯೆ ಡಾ. ಖುತೇಜಾ ದಂಡರಗಿ ಸಿಕ್ಕಿ ಬಿದ್ದಿದ್ದಾರೆ.
ಡಾ. ವಿವೇಕ ದೊರೆ ಮಾತನಾಡಿ, ಸ್ಟಿಂಗ್ ಆಪರೇಶನ್ ಮಾಡಿದ್ದು, ಇದು ಸಕ್ಸಸ್ ಆಗಿದೆ. ದಾಳಿ ಮುಂಚೆ ಯಾರಿಗೂ ಮಾಹಿತಿ ನೀಡಿರಲಿಲ್ಲ. ನಮ್ಮ ಡ್ರೈವರ್ಗೂ ಸಹಿತ ಗೊತ್ತಿರಲಿಲ್ಲ. ಮೊದಲು ಧಾರವಾಡ ಹೋಗೋಣ ಎಂದೆ, ಆಮೇಲೆ ದಾವಣಗೆರೆ, ತುಮಕೂರು ಎಂದು ಕಡೆಗೆ ಬೆಳಗಾವಿಗೆ ಅಂತಾ ಹೇಳಿದ್ದೆ. ಹಾಗಾಗಿ, ನಮ್ಮ ತಂಡದ ಯಾವ ಸದಸ್ಯರಿಗೂ ಮುಂಚೆ ಗೊತ್ತಿರಲಿಲ್ಲ. ಹಾಗಾಗಿ, ಗೋಕಾಕಿನ ಇಕ್ರಾ ಆಸ್ಪತ್ರೆ ಮೇಲೆ ದಾಳಿ ಮಾಡಿದ್ದು, ಕಳೆದ ಒಂದೂವರೇ ವರ್ಷದಲ್ಲಿ ಸುಮಾರು 70 ಭ್ರೂಣಗಳನ್ನು ಪತ್ತೆ ಮಾಡಿರುವುದು ಕಂಡು ಬಂದಿದೆ. ಇದು ಕಾನೂನು ಬಾಹಿರ ಅಂತಾ ಗೊತ್ತಿದ್ದರೂ ತಪ್ಪು ಎಸಗಿದ್ದಾರೆ. ಸದ್ಯ ಸ್ಕಾನಿಂಗ್ ಮಶಿನ್ ಸೀಜ್ ಮಾಡಿದ್ದೇವೆ. ಮುಂದೆ ಆಸ್ಪತ್ರೆಯನ್ನು ಸೀಜ್ ಮಾಡುವಂತೆ ಡಿಎಚ್ಒ ಅವರಿಗೆ ಸೂಚಿಸಿದ್ದೇನೆ ಎಂದರು.