ಹಾವೇರಿಯ ಎಲಿವಾಳ ಸೇತುವೆ ಸಂಪೂರ್ಣ ಮುಳುಗಡೆ (ETV Bharat) ಹಾವೇರಿ: ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಸೇರಿದಂತೆ ಹಾವೇರಿಯ ರಟ್ಟೀಹಳ್ಳಿ ತಾಲೂಕಿನ ಕುಮುದ್ವತಿ ನದಿ ಪಾತ್ರದಲ್ಲಿ ಭಾರೀ ಮಳೆಯಾಗುತ್ತಿದೆ. ಈ ಹಿನ್ನೆಲೆ ಕುಮುದ್ವತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನದಿಗೆ ಭರಪೂರ ನೀರು ಹರಿದು ಬಂದಿದ್ದರಿಂದ ಎಲಿವಾಳ ಸೇತುವೆ ಸಂಪೂರ್ಣ ಮುಳುಗಡೆ ಆಗಿದೆ. ಬಡಸಂಗಾಪುರದ ಬ್ರಿಡ್ಜ್ ಕಂ ಬ್ಯಾರೇಜ್ ಮುಳುಗಡೆ ಆಗಿದ್ದು, ಎಲಿವಾಳ, ಯಡಗೋಡ, ಬಡಸಂಗಾಪುರ ರಸ್ತೆ ಸಂಪರ್ಕ ಕಡಿತವಾಗಿದೆ.
ಜೊತೆಗೆ ಯಲಿವಾಳ ಮತ್ತು ರಟ್ಟೀಹಳ್ಳಿ ನಡುವಿನ ರಸ್ತೆ ಸಂಪರ್ಕವೂ ಬಂದ್ ಆಗಿದ್ದು, ಎಲಿವಾಳ ಗ್ರಾಮಸ್ಥರು ಊರು ಬಿಟ್ಟು ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಬಡಸಂಗಾಪುರ ಹಾಗೂ ಕುಡುಪಲಿ ನಡುವಿನ ಬ್ಯಾರೇಜ್ ಸಹ ಮುಳುಗಡೆಯಾಗಿದ್ದು, ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ನದಿಯಲ್ಲಿ ಭಾರಿ ಪ್ರಮಾಣದ ನೀರು ಹರಿಯುತ್ತಿರುವುದರಿಂದ ನದಿ ಪಾತ್ರದ ಹಲವು ಗ್ರಾಮಗಳ ರೈತರ ಜಮೀನುಗಳು ಜಲಾವೃತಗೊಂಡಿವೆ.
ರೈತರ ಜಮೀನಿನಲ್ಲಿದ್ದ ಬೆಳೆಗಳು, ನೀರಾವರಿ ಕೃಷಿಗೆ ಬಳಸುತ್ತಿದ್ದ ಪಂಪಸೆಟ್ ಸೇರಿದಂತೆ ಹಲವು ಕೃಷಿ ಉಪಕರಣಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ನದಿಯಲ್ಲಿ ನೀರು ಧುಮ್ಮಿಕ್ಕಿ ಹರಿಯುತ್ತಿರುವುದರಿಂದ ನದಿ ಪಾತ್ರದ ಗ್ರಾಮಗಳ ಜನರಿಗೆ ನೀರು ನುಗ್ಗುವ ಭೀತಿ ಎದುರಾಗಿದೆ. ಹಿರೇಮಾದಾಪುರ ಹಿರೇಮೋರಬ ಮಳಗಿ, ಮಾಸೂರು ಕುಡಪಲಿ ಗ್ರಾಮದ ಜನರು ಭಯ ಭೀತಿರಾಗಿದ್ದಾರೆ. ಈ ಹಳ್ಳಿಗಳು ನದಿ ಪಾತ್ರದ ಹತ್ತಿರ ಇರೋದರಿಂದ ಕೆಲವೊಂದು ಮನೆಗಳಿಗೆ ಪ್ರತಿ ವರ್ಷ ನೀರು ನುಗ್ಗುತ್ತದೆ. ಹೀಗಾಗಿ ಈ ವರ್ಷವೂ ಎಲ್ಲಿ ನೀರು ನುಗ್ಗುತ್ತದೆ ಎಂಬ ಆತಂಕ ಮನೆ ಮಾಡಿದೆ.
ಮಳೆಗೆ ಸೋರುತ್ತಿರುವ ಶಾಲಾ ಕೊಠಡಿಗಳು, ಮಕ್ಕಳೊಂದಿಗೆ ಪೋಷಕರು ಪ್ರತಿಭಟನೆ: ಶಾಲಾ ಕೊಠಡಿಗಳು ಸೋರುತ್ತಿರುವ ಹಿನ್ನೆಲೆ. ಶಾಲೆಯ ಗೇಟ್ಗೆ ಬೀಗ ಹಾಕಿ ವಿದ್ಯಾರ್ಥಿಗಳೊಂದಿಗೆ ಪೋಷಕರು ಪ್ರತಿಭಟನೆ ನಡೆಸಿದ ಘಟನೆ ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲೂಕಿನ ಪುರದಕೇರಿ ಗ್ರಾಮದಲ್ಲಿ ನಡೆದಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳು ಸೋರುತ್ತಿವೆ. ಇದರಿಂದ ರೊಚ್ಚಿಗೆದ್ದ ಪೋಷಕರು. ಶಾಲಾ ಕೊಠಡಿ ದುರಸ್ತಿ ಮಾಡಿ ಮಕ್ಕಳಿಗೆ ಅನುಕೂಲ ಮಾಡಿಕೊಡುವಂತೆ ಪಟ್ಟು ಹಿಡಿದರು. ಸ್ಥಳಕ್ಕೆ ರಟ್ಟೀಹಳ್ಳಿ ಬಿಇಒ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಬಿಇಒ ಜೊತೆ ಗ್ರಾಮಸ್ಥರು ಮಾತಿನ ಚಕಮಕಿ ನಡೆಸಿದರು. ರಟ್ಟೀಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದನ್ನೂ ಓದಿ:ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ: ಗಡ್ಡೆಗೂಳಿ ಶ್ರೀ ಬಸವೇಶ್ವರ ದೇವಾಲಯ ಜಲಾವೃತ - temple is flooded