ಬೆಂಗಳೂರು: ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಇದೇ ಮೊದಲ ಬಾರಿಗೆ 60 ಆನೆಗಳ ಹಿಂಡು ಲಗ್ಗೆ ಇಟ್ಟಿವೆ. ಜೀವಂತ ಆನೆಗಳನ್ನು ಮೀರಿಸುವಂತೆ ಕಾಡಿನ ಕಳೆಗಿಡವಾದ ಲಂಟಾನದಿಂದ ಸಿದ್ಧಪಡಿಸಲಾದ ಬರೋಬ್ಬರಿ 60 ಆನೆಗಳು ಲಾಲ್ ಬಾಗ್ನ ಗಾಜಿನ ಮನೆ ಸುತ್ತಲಿನ ಹುಲ್ಲು ಹಾಸಿನ ಮೇಲೆ ಪ್ರದರ್ಶನಕ್ಕಿಟ್ಟಿದ್ದು, ನೋಡುಗರನ್ನು ಮೂಕ ವಿಸ್ಮಿತರನ್ನಾಗಿ ಮಾಡುತ್ತಿವೆ.
ದೂರದಿಂದ ನೋಡಿದರೆ ನಿಜವಾದ ಆನೆಗಳೇ ಎಂಬಂತೆ ಗೋಚರಿಸುವ ದೊಡ್ಡ ಆನೆಗಳು, ಮರಿ ಆನೆಗಳು ಇಲ್ಲಿನ ಮರಗಿಡಗಳ ನಡುವೆ ವಿಶ್ರಾಂತಿ ಪಡೆಯುತ್ತಿವೆ ಎಂಬಂತೆ ಕಾಣುತ್ತಿವೆ. ನೀಲಗಿರಿ ಬಯೋಸ್ಪೀಯರ್ ರಿಸರ್ವ್ ಪ್ರದೇಶ, ಮಲೆಮಹದೇಶ್ವರಬೆಟ್ಟ ಸೇರಿದಂತೆ ಇತರ ಕಡೆಗಳಲ್ಲಿ ವಾಸವಿರುವ ಸೋಲಿಗರು, ಜೇನು ಕುರುಬರು, ಬೆಟ್ಟ ಕುರುಬರು, ಪನಯಾ ಮತ್ತು ಇತರೆ ಬುಡಕಟ್ಟು ಜನಾಂಗದ ಪರಿಣಿತರು ಜೀವಂತ ಆನೆಗಳ ರೀತಿ ಅವುಗಳ ಪ್ರತಿರೂಪಗಳನ್ನೇ ಸಿದ್ಧಪಡಿಸಿದ್ದು, ಲಾಲ್‌ಬಾಗ್‌ನಲ್ಲಿ ಒಂದು ತಿಂಗಳ ಕಾಲ ಸಾರ್ವಜನಿಕರ ಪ್ರದರ್ಶನಕ್ಕೆ ಲಭ್ಯವಿರಲಿವೆ ಎಂದು ಅರಣ್ಯ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಹಬಾಳ್ವೆಗೆ ಜಾಗೃತಿ:ಮನುಷ್ಯ-ಪ್ರಾಣಿಗಳ ನಡುವಿನ ಸಹಬಾಳ್ವೆ ಕುರಿತು ಸಮಾಜಕ್ಕೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಆನೆಗಳ ಪ್ರತಿರೂಪಗಳನ್ನು ಲಾಲ್‌ಬಾಗ್‌ನ ಗಾಜಿನಮನೆ, ಜಂಟಿ ನಿರ್ದೇಶಕರ ಕಚೇರಿಯ ಆವರಣ ಸೇರಿದಂತೆ ಸುತ್ತಮುತ್ತಲ ಹುಲ್ಲಿನ ಹಾಸಿನಲ್ಲಿ ಮೇಯುವಂತೆ ಇಡಲಾಗಿದೆ. ಇದರಿಂದ ಉದ್ಯಾನ ನಗರಿಯಲ್ಲಿ ಆನೆಗಳಂತೆ ಪ್ರವಾಸಿಗರಿಗೆ ಗೋಚರಿಸುತ್ತಿವೆ. ಜತೆಗೆ, ಇಲ್ಲಿಗೆ ಬರುವ ಮಕ್ಕಳಿಗೂ ಮನೋರಂಜನೆ ಹಾಗೂ ಸಹಬಾಳ್ವೆ ಕುರಿತಂತೆ ಅರಿವು ಮೂಡಿಸಿದಂತಾಗಲಿದೆ ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಡಾ. ಜಗದೀಶ್ ಮಾಹಿತಿ ನೀಡಿದರು.
ಒಂದು ತಿಂಗಳ ಮಾತ್ರ ಲಾಲ್‌ಬಾಗ್‌ನಲ್ಲಿ ಪ್ರದರ್ಶನ:ಲಾಲ್ಬಾಗ್ಗೆ ಲಗ್ಗೆ ಇಟ್ಟಿರುವ ಈ ಆನೆಗಳ ಪ್ರತಿಕೃತಿಗಳು ಒಂದು ತಿಂಗಳು ಕಾಲ ಅಂದರೆ ಫೆಬ್ರುವರಿ 3 ರಿಂದ ಮಾರ್ಚ್ 3ರ ವರೆಗೂ ಪ್ರದರ್ಶನಕ್ಕಿರಲಿವೆ. ಇದಾದ ಬಳಿಕ ವಿದೇಶಕ್ಕೆ ರವಾನೆಯಾಗಲಿವೆ ಎಂದು ಅವರು ಹೇಳಿದರು.