ಬೆಂಗಳೂರು: ರಾಜಾಜಿನಗರದ ಡಾ. ರಾಜ್‌ಕುಮಾರ್ ರಸ್ತೆಯಲ್ಲಿರುವ ಮೈ ಇವಿ ಸ್ಟೋರ್ ಹೆಸರಿನ ಶೋರೂಂನಲ್ಲಿ ಮಂಗಳವಾರ ಸಂಜೆ ಸಂಭವಿಸಿದ ಬೆಂಕಿ ಅವಘಡದಲ್ಲಿ ಮಹಿಳಾ ಸಿಬ್ಬಂದಿಯೊಬ್ಬರು ಮೃತಪಟ್ಟ ಪ್ರಕರಣ ಸಂಬಂಧ ಶೋರೂಂ ಮಾಲೀಕ ಹಾಗೂ ವ್ಯವಸ್ಥಾಪಕನನ್ನು ರಾಜಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಯಶವಂತಪುರದ ನಿವಾಸಿ, ಶೋರೂಂ ಮಾಲೀಕ ಪುನೀತ್‌ಗೌಡ ಅಲಿಯಾಸ್ ಎಚ್.ಜಿ.ಪುನೀತ್(36) ಹಾಗೂ ರಾಜಾಜಿನಗರದ ಆರನೇ ಬ್ಲಾಕ್ ನಿವಾಸಿ ಹಾಗೂ ಶೋರೂಮ್‌ನ ವ್ಯವಸ್ಥಾಪಕ ಜಿ.ಯುವರಾಜ್(30) ಬಂಧಿಸಿ, ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ಕೋರ್ಟ್ ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಹಾಸನ ಮೂಲದ ಪುನೀತ್‌ಗೌಡ ರಾಜಾಜಿನಗರದ ರಾಜ್‌ಕುಮಾರ್ ರಸ್ತೆಯಲ್ಲಿ ಇ.ವಿ ಎಲೆಕ್ಟ್ರಿಕ್ ಬೈಕ್ ಶೋರೂಂ ನಡೆಸುತ್ತಿದ್ದರು. ಮಂಗಳವಾರ ಸಂಜೆ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಓಕಳಿಪುರದ ನಿವಾಸಿ, ಹಣಕಾಸು ವಿಭಾಗದಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಪ್ರಿಯಾ (27) ಸಜೀವದಹನ ಆಗಿದ್ದರು. ದಿಲೀಪ್ ಸೇರಿ ಮೂವರು ಗಾಯಗೊಂಡಿದ್ದರು. ಘಟನೆಯಲ್ಲಿ 25ಕ್ಕೂ ಎಲೆಕ್ಟ್ರಿಕ್ ಬೈಕ್‌ಗಳು ಬೆಂಕಿಗಾಹುತಿಯಾಗಿದ್ದವು.