ರಾಜ್ಯ ವಿಜ್ಞಾನ ಪರಿಷತ್ ಆಡಳಿತ ಮಂಡಳಿಗೆ ಚುನಾವಣೆ : ಸರ್ಕಾರಕ್ಕೆ ನೋಟಿಸ್ - SCIENCE COUNCIL GOVERNING BOARD
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಆಡಳಿತ ಮಂಡಳಿಯ ಅವಧಿ 2023ರ ಫೆ.26ಕ್ಕೆ ಮುಕ್ತಾಯವಾಗಿದೆ. ಹೀಗಾಗಿ ಚುನಾವಣೆ ನಡೆಸುವಂತೆ ನಿರ್ದೇಶನಕ್ಕೆ ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದೆ.
ರಾಜ್ಯ ವಿಜ್ಞಾನ ಪರಿಷತ್ ಆಡಳಿತ ಮಂಡಳಿಗೆ ಚುನಾವಣೆ : ಸರ್ಕಾರಕ್ಕೆ ನೋಟಿಸ್ (ETV Bharat)
ಬೆಂಗಳೂರು:ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಆಡಳಿತ ಮಂಡಳಿಯ ಆಯ್ಕೆಗೆ ಚುನಾವಣೆ ನಡೆಸುವಂತೆ ನಿರ್ದೇಶನ ನೀಡಲು ಕೋರಿ ಸಲ್ಲಿಸಲಾದ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಮಾಜಿ ಅಧ್ಯಕ್ಷ ಗಿರೀಶ್ ಕಡ್ಲೆವಾಡ ಹಾಗೂ ಮಾಜಿ ಜಂಟಿ ಕಾರ್ಯದರ್ಶಿ ಬಿ.ಎನ್. ಶ್ರೀನಾಥ್ ಎಂಬುವರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ಏಕಸದಸ್ಯ ಪೀಠ, ರಾಜ್ಯ ಸರ್ಕಾರ, ವಿಜ್ಞಾನ ಪರಿಷತ್ತು ಸೇರಿ ಇತರ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.
ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಪರಿಷತ್ತಿನ ಆಡಳಿತ ಮಂಡಳಿಯ ಅವಧಿ 2023ರ ಫೆ.26ಕ್ಕೆ ಮುಕ್ತಾಯವಾಗಿದೆ. ಮತದಾರರ ಪಟ್ಟಿಯಲ್ಲಿ ಗೊಂದಲಗಳು ಇರುವ ಕಾರಣ ಎರಡು ಬಾರಿ ಚುನಾವಣೆ ಮುಂದೂಡಲಾಗಿದೆ. ಆದ್ದರಿಂದ ಚುನಾವಣೆ ನಡೆಸಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿದರು. ಸರ್ಕಾರದ ಪರ ವಕೀಲರು, ಸದಸ್ಯರಾಗಿ ನೋಂದಣಿಯಾಗಿ ಒಂದು ವರ್ಷ ಪೂರ್ಣಗೊಳಿಸಿದವರು ಪರಿಷತ್ತಿನ ಚುನಾವಣೆಗೆ ಮತದಾರರು ಆಗಬಹುದು. ಆದರೆ, ಒಂದೇ ದಿನ ರಾತ್ರೋರಾತ್ರಿ 2,221 ಮತದಾರರನ್ನು ಏಕಕಾಲಕ್ಕೆ ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.
ಚುನಾವಣೆ ಮುಂದೂಡಿ ಹೊರಡಿಸಿರುವ ಅಧಿಸೂಚನೆ ರದ್ದುಪಡಿಸಬೇಕು. ವಿಜ್ಞಾನ ಪರಿಷತ್ತಿಗೆ ಚುನಾವಣೆ ನಡೆಸುವಂತೆ ಸಹಕಾರ ಸಂಘಗಳ ಉಪ ನೋಂದಣಾಧಿಕಾರಿ ಹಾಗೂ ಚುನಾವಣಾಧಿಕಾರಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.