ಕರ್ನಾಟಕ

karnataka

By ETV Bharat Karnataka Team

Published : Apr 8, 2024, 4:17 PM IST

ETV Bharat / state

ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಿ: ಮೈಸೂರು ಡಿಸಿ ಡಾ.ಕೆ.ವಿ.ರಾಜೇಂದ್ರ - Voter Awareness Program

ಮತದಾನ ಜಾಗೃತಿಗಾಗಿ ಮೈಸೂರಿನಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯಿಂದ ನಡೆದ ಚುನಾವಣಾ ಹಬ್ಬ ಕಾರ್ಯಕ್ರಮಕ್ಕೆ ಚುನಾವಣಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಚಾಲನೆ ನೀಡಿದರು.

election festival program was organized by District Collector K. V Rajendra inaugurated
ಚುನಾವಣಾ ಹಬ್ಬದ ಕಾರ್ಯಕ್ರಮಕ್ಕೆ ಚುನಾವಣಾಧಿಕಾರಿ ಡಾ ಕೆ. ವಿ ರಾಜೇಂದ್ರ ಚಾಲನೆ ನೀಡಿದರು.

ಮೈಸೂರು:ಚುನಾವಣೆ ಎಂಬುದು ಪ್ರಜಾಪ್ರಭುತ್ವದ ಹಬ್ಬ. ಪ್ರತಿಯೊಬ್ಬ ಮತದಾರನೂ ಯಾವುದೇ ಜಾತಿ, ಮತ, ಧರ್ಮ ನೋಡದೆ ಸೂಕ್ತವಾದ ವ್ಯಕ್ತಿಗೆ ಕಡ್ಡಾಯವಾಗಿ ಮತಹಾಕುವ ಮೂಲಕ ಪ್ರಜಾಪ್ರಭುತ್ವ ಹಬ್ಬವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದರು.

ಮತದಾರರು ಯಾವುದೇ ಆಸೆ, ಆಮಿಷಗಳಿಗೆ ಒಳಗಾಗಬಾರದು. ವಿದ್ಯಾವಂತರು ಮತದಾನದ ಪ್ರಾಮುಖ್ಯತೆಯನ್ನು ತಿಳಿದುಕೊಂಡು ತಮ್ಮ ಕುಟುಂಬ ಹಾಗೂ ಸುತ್ತಮುತ್ತಲಿನ ಜನರಿಗೂ ಇದರ ಬಗ್ಗೆ ಜಾಗೃತಿ ಮೂಡಿಸಬೇಕು. ಈ ಮೂಲಕ ಪ್ರತಿಯೊಬ್ಬರೂ ನೈತಿಕ ಮತದಾನ ಮಾಡುವಂತೆ ಮಾಡಬೇಕೆಂದು ಸೂಚಿಸಿದರು.

ಚುನಾವಣಾ ಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನತೆ

ಕಳೆದ ಲೋಕಸಭಾ ಚುನಾವಣೆಯಲ್ಲಿ ಮೈಸೂರು ಜಿಲ್ಲೆಯಲ್ಲಿ ಶೇ.70 ರಷ್ಟು ಮತದಾನವಾಗಿದೆ. 2021ರ ವಿಧಾನಸಭಾ ಚುನಾವಣೆಯಲ್ಲಿ 75%ರಷ್ಟು ಮತದಾನ ಆಗಿತ್ತು. ಹಾಗಾಗಿ ಈ ಬಾರಿಯ ಚುನಾವಣೆಯಲ್ಲಿ ಮತದಾನ ಪ್ರಮಾಣವನ್ನು ಹೆಚ್ಚಿಸಲು ಜಿಲ್ಲಾ ಸ್ವೀಪ್ ಸಮಿತಿಯಿಂದ ಹಲವಾರು ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಮತದಾರರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ ಎಂದರು.

ಚುನಾವಣೆ ಹತ್ತಿರವಾಗುತ್ತಿದ್ದು, ಪ್ರತಿಯೊಬ್ಬರೂ ವೋಟಿಂಗ್ ಹೆಲ್ಪಿಂಗ್ ಆ್ಯಪ್ ಮೂಲಕ ತಮ್ಮ ಹೆಸರು ಹಾಗೂ ತಮ್ಮ ಕುಟುಂಬದವರ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ನಂತರ ತಮ್ಮ ಪೋಲಿಂಗ್ ಸ್ಟೇಷನ್ ಯಾವುದು ಎಂಬುದನ್ನು ತಿಳಿದುಕೊಳ್ಳಬೇಕು ಎಂದು ತಿಳಿಸಿದರು.

ನೋ ಯುವರ್ ಪೋಲಿಂಗ್ ಸ್ಟೇಷನ್ ಅಭಿಯಾನ:ಚುನಾವಣೆ ಎಂಬುದು ಕೇವಲ ಅಧಿಕಾರಿಗಳಿಗೆ ಮಾತ್ರ ಸೀಮಿತವಲ್ಲ. ನೋ ಯುವರ್ ಪೋಲಿಂಗ್ ಸ್ಟೇಷನ್ ಅಭಿಯಾನದಡಿ ಪ್ರತಿಯೊಬ್ಬರು ಸಹಕರಿಸಿ, ಒಮ್ಮೆ ತಮ್ಮ ಮತಗಟ್ಟೆಗೆ ಭೇಟಿ ನೀಡಿ ಅಲ್ಲಿ ನ್ಯೂನ್ಯತೆಗಳು ಕಂಡುಬಂದರೆ ಅದನ್ನು ಸ್ಥಳೀಯ ಚುನಾವಣಾ ಅಧಿಕಾರಿಗಳಿಂದ ಸರಿಪಡಿಸಿಕೊಳ್ಳಬೇಕು ಎಂದರು.

ಮಕ್ಕಳಿಗೆ ವಿವಿಧ ಸ್ಪರ್ಧೆ ಆಯೋಜನೆ

ಚುನಾವಣೆ ಸಂಬಂಧ ಯಾವುದೇ ಅಕ್ರಮಗಳು ಕಂಡುಬಂದರೂ ಸಿ ವಿಜಿಲ್ ಆ್ಯಪ್​​​ನಲ್ಲಿ ವಿಡಿಯೋ, ಆಡಿಯೋ, ಫೋಟೋ ಹಾಗೂ ಜಿಪಿಎಸ್ ಮೂಲಕ ಮಾಹಿತಿಯನ್ನು ಸಲ್ಲಿಸಿ ದೂರನ್ನು ನೀಡಬಹುದಾಗಿದ್ದು, ಅಕ್ರಮಗಳ ವಿರುದ್ಧ ಶೀಘ್ರದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಈ ರೀತಿ ಸಾರ್ವಜನಿಕರು ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿದಾಗ ಅವರ ಹೆಸರು ಹಾಗೂ ವಿಳಾಸ ಯಾವುದನ್ನು ಸಹ ಬಹಿರಂಗ ಪಡಿಸುವುದಿಲ್ಲ ಎಂದರು.

ಗುರುತಿನ ದಾಖಲಾತಿ:ಮತದಾರರ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸಿರುವ ಮತದಾರರ ಕಾರ್ಡ್ ಅನ್ನು ಈಗಾಗಲೇ ಪರೀಕ್ಷಿಸಿ ಅವರಿಗೆ ಅಂಚೆ ಮೂಲಕ ಮತದಾರರ ಗುರುತಿನ ಚೀಟಿಯನ್ನು ಮನೆಗೆ ತಲುಪಿಸುವ ಪ್ರಯತ್ನ ಆಗುತ್ತಿದೆ. ಒಂದು ವೇಳೆ ನಿಮ್ಮ ಅರ್ಜಿ ನೋಂದಣಿಯಾಗಿ ಗುರುತಿನ ಚೀಟಿ ಬರದಿದ್ದರೆ ಅಂತಹ ಮತದಾರರು ತಮ್ಮಲ್ಲಿರುವ ಆಧಾರ್ ಕಾರ್ಡ್, ಪಾನ್ ಕಾರ್ಡ್, ರೇಷನ್ ಕಾರ್ಡ್ ಇತ್ಯಾದಿ ಗುರುತಿನ ದಾಖಲಾತಿಗಳನ್ನು ತೆಗೆದುಕೊಂಡು ಮತದಾನ ಮಾಡಬಹುದಾಗಿದೆ ಎಂದು ಮಾಹಿತಿ ನೀಡಿದರು.

80 ವರ್ಷ ಮೇಲ್ಪಟ್ಟ ಹಾಗೂ ಶೇ.40ಕ್ಕಿಂತ ಹೆಚ್ಚಿನ ಅಂಗವಿಕಲತೆ ಹೊಂದಿರುವ ಮತದಾರರಿಗೆ ಮನೆಯಿಂದಲೇ ಮತದಾನ ಮಾಡುವ ಅವಕಾಶವಿದ್ದು ಅದನ್ನು ಸದುಪಯೋಗಪಡಿಸಿಕೊಂಡು ಪ್ರತಿಯೊಬ್ಬರೂ ಮತದಾನ ಮಾಡಬೇಕು. ಬೇರೆ ಬೇರೆ ಸ್ಥಳಗಳಿಂದ ಬಂದಿರುವ ಕಾರ್ಮಿಕರು ಮತದಾನ ಮಾಡುವಲ್ಲಿ ಹಿಂಜರಿಯುತ್ತಿದ್ದು, ಅಂತಹವರಿಗೆ ಮತದಾನದ ಬಗ್ಗೆ ಅರಿವನ್ನು ಮೂಡಿಸಿ ಮತದಾನ ಮಾಡುವಂತೆ ಮಾಡಬೇಕು ಎಂದು ಹೇಳಿದರು.

ಈ ಬಾರಿಯ ಚುನಾವಣೆಯು ವಾರಾಂತ್ಯದಲ್ಲಿ ಇರುವುದರಿಂದ ಜನರು ಮತದಾನವನ್ನು ನಿರ್ಲಕ್ಷಿಸಿ ಪ್ರವಾಸಕ್ಕೆ ಹೋಗಲು ಸಿದ್ದರಿರುತ್ತಾರೆ. ಆದರೆ ಮತದಾನ ಎಂಬುದು ಪ್ರತಿಯೊಬ್ಬನ ಹಕ್ಕು. ಮೊದಲು ಮತದಾನಕ್ಕೆ ಪ್ರಾಮುಖ್ಯತೆಯನ್ನು ನೀಡಬೇಕು. ಮತದಾರರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಕ್ಯೂ ಮ್ಯಾನೇಜ್ ಮೆಂಟ್ ಆಪ್ ಅನ್ನು ಹೊರತರಲಾಗಿದ್ದು, ಇದರಿಂದ ಮತದಾರರು ತಮ್ಮ ಮತಗಟ್ಟೆಯಲ್ಲಿ ಎಷ್ಟು ಕ್ಯೂ ಇದೆ ಎಂಬುದನ್ನು ತಿಳಿದುಕೊಂಡು ಮತದಾನ ಮಾಡಬಹುದು ಎಂದರು.

ಕಾರ್ಯಕ್ರಮದಲ್ಲಿ ಜಿ.ಪಂ.ಸಿಇಒ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷ ಕೆ.ಎಂ ಗಾಯತ್ರಿ, ಪೊಲೀಸ್ ಆಯುಕ್ತ ರಮೇಶ್ ಬನೋತ್, ಎಸ್ಪಿ ಸೀಮಾ ಲಾಟ್ಕರ್, ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶಿಲ್ಪಿ ಅಗರ್ವಾಲ್, ಜಿಲ್ಲಾ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತ ಎನ್.ಎನ್.ಮಧು ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂಓದಿ:ಲೋಕಸಭೆ ಚುನಾವಣೆ: ರಾಜ್ಯದಲ್ಲಿ ನಗದು ಸೇರಿ 262 ಕೋಟಿ ಮೌಲ್ಯದ ವಿವಿಧ ವಸ್ತುಗಳು ಜಪ್ತಿ - LOK SABHA ELECTION

ABOUT THE AUTHOR

...view details