ಬೆಳಗಾವಿ: ಬೆಳಗಾವಿಯಲ್ಲಿ ಸೆ.16ರಂದು ನಡೆಯಬೇಕಿದ್ದ ಈದ್ ಮಿಲಾದ್ ಮೆರವಣಿಗೆಯನ್ನು ಗಣೇಶೋತ್ಸವ ಹಿನ್ನೆಲೆಯಲ್ಲಿ ಸೆ.22ಕ್ಕೆ ಮುಂದೂಡುವ ಮೂಲಕ ಮುಸ್ಲಿಂ ಮುಖಂಡರು, ಧರ್ಮಗುರುಗಳು ಮತ್ತೊಮ್ಮೆ ಸಾಮರಸ್ಯದ ಹೆಜ್ಜೆ ಇಟ್ಟಿದ್ದಾರೆ. ಅಲ್ಲದೇ ಮುಸ್ಲಿಂ ಹಬ್ಬದ ಮೆರವಣಿಗೆಗಳಲ್ಲಿ ಡಾಲ್ಬಿ, ಡಿಜೆ ಬಳಸದಂತೆ ದಿಟ್ಟ ನಿರ್ಧಾರ ಕೈಗೊಳ್ಳಲಾಗಿದೆ.
ಮತ್ತೆ ಸಾಮರಸ್ಯದ ಹೆಜ್ಜೆ ಇಟ್ಟ ಮುಸ್ಲಿಂ ಮುಖಂಡರು (ETV Bharat) ಕ್ಯಾಲೆಂಡರ್ ಪ್ರಕಾರ ಈದ್ ಮಿಲಾದ್ ಮೆರವಣಿಗೆ ಸೆ.16ಕ್ಕೆ, ಗಣೇಶ ಮೂರ್ತಿ ನಿಮಜ್ಜನ ಮೆರವಣಿಗೆ ಸೆ.17ಕ್ಕೆ ನಡೆಯಬೇಕಿದೆ. ಆದರೆ, ಬೆಳಗಾವಿಯಲ್ಲಿ ಗಣೇಶ ಮೂರ್ತಿಗಳ ನಿಮಜ್ಜನ ಮೆರವಣಿಗೆ ಬಹಳ ಅದ್ಧೂರಿಯಾಗಿ ನಡೆಯಲಿದ್ದು, ಲಕ್ಷಾಂತರ ಜನ ಸೇರುತ್ತಾರೆ. ಈ ವೇಳೆ ಯಾವುದೇ ರೀತಿ ಅಹಿತಕರ ಘಟನೆಗಳು ಸಂಭವಿಸಬಾರದು ಎಂಬ ಉದ್ದೇಶದಿಂದ ಶುಕ್ರವಾರ ಸಭೆ ಸೇರಿದ್ದ ಮುಸ್ಲಿಂ ಸಮಾಜದ ಹಿರಿಯರು, ವಿವಿಧ ಕಮಿಟಿಗಳ ಪದಾಧಿಕಾರಿಗಳು ಹಾಗೂ ಧರ್ಮಗುರುಗಳು ಈದ್ ಮಿಲಾದ್ ಮೆರವಣಿಗೆಯನ್ನು ಮುಂದೂಡಲು ಒಮ್ಮತದ ನಿರ್ಣಯ ಕೈಗೊಂಡರು.
ಸಭೆಯಲ್ಲಿ ಶಾಸಕ ಆಸೀಫ್ ಸೇಠ್, ಇಸ್ಲಾಂ ಧರ್ಮಗುರುಗಳಾದ ಮುಫ್ತಿ ಮಂಜೂರ್ ಅಹ್ಮದ್ ರಿಜ್ವಿ, ಹಫೀಜ್ ನಜೀರುಲ್ಲಾ ಖಾದ್ರಿ, ಸರ್ದಾರ್ ಅಹ್ಮದ್, ಮುಷ್ಕಾಕ್ ನಯೀಮ್ ಅಹ್ಮದ್ ಸೇರಿ ಮತ್ತಿತರರು ಇದ್ದರು. ಈ ನಿರ್ಧಾರವನ್ನು ಸಾರ್ವಜನಿಕ ಗಣೇಶ ಮಂಡಳಿಗಳು ಸ್ವಾಗತಿಸಿವೆ.
ಹಿಂದಿನ ವರ್ಷವೂ ಈದ್ ಮಿಲಾದ್ ಮತ್ತು ಗಣೇಶೋತ್ಸವ ಮೆರವಣಿಗೆ ಎರಡೂ ಕೂಡಿಯೇ ಬಂದಿದ್ದವು. ಆಗಲೂ ಮುಸ್ಲಿಂ ಮುಖಂಡರು ಈದ್ ಮಿಲಾದ್ ಮೆರವಣಿಗೆ ಮುಂದೂಡಿ ಇಡೀ ರಾಜ್ಯಕ್ಕೆ ಕೋಮು ಸಾಮರಸ್ಯದ ಸಂದೇಶ ಸಾರಿದ್ದರು. ಈ ವರ್ಷವೂ ಕೂಡ ಅದೇ ನಿರ್ಧಾರ ಕೈಗೊಳ್ಳುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇನ್ನು, ಸೆ.16ರಂದು ಪದ್ಧತಿ ಪ್ರಕಾರ ಎಲ್ಲ ಮಸೀದಿ ಹಾಗೂ ಮನೆಗಳಲ್ಲಿ ಈದ್ ಆಚರಣೆಗಳು ನಡೆಯಲಿವೆ. ಮೆರವಣಿಗೆ ಮಾತ್ರ 22ಕ್ಕೆ ನಡೆಯಲಿದೆ.
ಶಾಸಕ ಆಸೀಫ್ ಸೇಠ್ ಈಟಿವಿ ಭಾರತ ಜೊತೆಗೆ ಮಾತನಾಡಿ, ಬೆಳಗಾವಿಯಲ್ಲಿ ಏಕತೆ ಮತ್ತು ಶಾಂತಿ ನೆಲೆಸಬೇಕು. ಎಲ್ಲಾ ಹಬ್ಬಗಳನ್ನು ನಾವೆಲ್ಲಾ ಒಗ್ಗಟ್ಟಾಗಿ ಆಚರಿಸಬೇಕೆಂದು ಈ ನಿರ್ಧಾರ ಕೈಗೊಂಡಿದ್ದೇವೆ. ಇದರಿಂದ ಒಳ್ಳೆಯ ಸಂದೇಶ ನೀಡಿದ್ದೇವೆ. ಹಾಗಾಗಿ, ಎಲ್ಲರೂ ಒಳ್ಳೆಯ ರೀತಿ ಗಣೇಶ ಹಬ್ಬ ಆಚರಿಸಿ. ನಾನು ಗಣೇಶೋತ್ಸವದಲ್ಲಿ ಭಾಗಿಯಾಗುತ್ತೇನೆ. ಅದೇ ರೀತಿ ನೀವು ಕೂಡ ಈದ್ ಮಿಲಾದ್ ಹಬ್ಬದಲ್ಲಿ ಭಾಗವಹಿಸಿ ಎಂದು ಕೋರಿದರು.
ಮುಸ್ಲಿಂ ಹಬ್ಬದ ಮೆರವಣಿಗೆಯಲ್ಲಿ ಡಾಲ್ಬಿ ಬ್ಯಾನ್:ಸಾಮಾಜಿಕ ಕಾರ್ಯಕರ್ತ ಮೆಹಬೂಬ್ ಮಕಾನದಾರ್ ಮಾತನಾಡಿ, ಇದು ಧರ್ಮ ಧರ್ಮಗಳ ನಡುವಿನ ಮನಸ್ಸು ಬೆಸೆಯುವ ಮತ್ತು ಸಾಮರಸ್ಯ ಸಾರುವ ಐತಿಹಾಸಿಕ ನಿರ್ಧಾರ. ಈದ್ ಮಿಲಾದ್ ಮತ್ತು ಗಣೇಶೋತ್ಸವ ಎರಡೂ ಹಬ್ಬಗಳು ಯಶಸ್ವಿಯಾಗಿ ಆಚರಿಸಬೇಕು. ಮತ್ತು ನಗರದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಆಗಬಾರದೆಂದು ಈದ್ ಮಿಲಾದ್ ಮುಂದೂಡಲಾಗಿದೆ. ಅದೇ ರೀತಿ ಮುಸ್ಲಿಂ ಧರ್ಮೀಯರ ಈದ್ ಮಿಲಾದ್, ರಂಜಾನ್ ಸೇರಿ ಯಾವುದೇ ಹಬ್ಬದಲ್ಲೂ ಡಾಲ್ಬಿ ಮತ್ತು ಡಿಜೆ ಬಳಸಬಾರದು ಎಂಬ ದಿಟ್ಟ ನಿರ್ಣಯವನ್ನೂ ಇಂದಿನ ಸಭೆಯಲ್ಲಿ ಕೈಗೊಳ್ಳಲಾಗಿದೆ. ಧರ್ಮದ ಆಚರಣೆಗಳು ಅರ್ಥಪೂರ್ಣ ಮತ್ತು ಶ್ರದ್ಧಾ ಭಕ್ತಿಯಿಂದ ಕೂಡಿರಬೇಕು ಎಂದು ಕರೆ ನೀಡಿರುವ ಧರ್ಮಗುರುಗಳಿಗೆ ಮನಸ್ಪೂರ್ವಕವಾಗಿ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದರು.
ಸಾರ್ವಜನಿಕ ಗಣೇಶ ಮಂಡಳಿ ಮುಖಂಡ ವಿಕಾಸ ಕಲಘಟಗಿ ಮಾತನಾಡಿ, ಮುಸ್ಲಿಂ ಸಮಾಜದ ನಿರ್ಣಯವನ್ನು ನಾನು ಸ್ವಾಗತಿಸುತ್ತೇನೆ. ಬೆಳಗಾವಿ ಹಲವು ಧರ್ಮೀಯರು, ಭಾಷಿಕರು, ಸಮುದಾಯದವರು ನೆಲೆಸಿರುವ ನಗರ. ಹಾಗಾಗಿ, ನಾವೆಲ್ಲರೂ ಒಂದಾಗಿ ಬಾಳುತ್ತಿದ್ದೇವೆ. ಈದ್ ಮಿಲಾದ್ ಮೆರವಣಿಗೆಗೆ ನಾವು ಹೋಗುತ್ತೇವೆ. ಗಣೇಶೋತ್ಸವದಲ್ಲಿ ಮುಸ್ಲಿಂ ಧರ್ಮಗುರುಗಳು, ಮುಖಂಡರು ಭಾಗಿಯಾಗುತ್ತಾರೆ. ಇದು ನಮ್ಮ ಬೆಳಗಾವಿ ವಿಶೇಷತೆ ಎಂದರು.
ಒಟ್ಟಿನಲ್ಲಿ ಮುಸ್ಲಿಂ ಸಮುದಾಯದ ಈ ನಡೆಗೆ ಎಲ್ಲೆಡೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ:ಚತುರ್ಥಿ ಪ್ರಸಾದಕ್ಕೆ ಪರವಾನಗಿ: 'ರಾಜ್ಯ ಸರ್ಕಾರದ್ದು ಹುಚ್ಚು ಆದೇಶ, ಅಗತ್ಯ ಬಿದ್ದರೆ ಧಿಕ್ಕರಿಸಿ': ಪ್ರಹ್ಲಾದ್ ಜೋಶಿ ಕರೆ - license for Chaturthi Prasada