ಬಾಗಲಕೋಟೆ: ''ಈಗಿನ ಶಿಕ್ಷಣ ಸಚಿವರಿಗೆ ಕನ್ನಡ ಬರಲ್ಲ. ಅವರು ಓದಿರುವುದು ಇಂಗ್ಲಿಷ್ ಮಾಧ್ಯಮದಲ್ಲಿ. ಕುವೆಂಪು, ಬೇಂದ್ರೆ, ಬಸವಣ್ಣರಂಥವರು ಯಾರೆಂಬುದು ಅವರಿಗೆ ಗೊತ್ತಿಲ್ಲ. ಅಂಥವರು ಶಿಕ್ಷಣ ಸಚಿವರಾಗಿದ್ದಾರೆ'' ಎಂದು ಸಾಹಿತಿ ಕುಂ.ವೀರಭದ್ರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನವನಗರದ ಅಂಬೇಡ್ಕರ್ ಭವನದಲ್ಲಿ 11ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ''ಇಂತಹ ಸಚಿವರನ್ನು ಮುಖ್ಯಮಂತ್ರಿಗೆ ಹೇಳಿ ಬದಲಾವಣೆ ಮಾಡಿಸಿ'' ಎಂದು ವೇದಿಕೆಯ ಮೇಲೆ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ವೈ.ಮೇಟಿ ಅವರಿಗೆ ಹೇಳುವ ಮೂಲಕ ಪ್ರಾಥಮಿಕ, ಪೌಢ್ರ ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
''ಆತನನ್ನು ನೋಡಿದರೆ ಶಿಕ್ಷಣದ ಬಗ್ಗೆ ಭ್ರಮನಿರಸನ ಉಂಟಾಗುತ್ತದೆ. ಗಡ್ಡಕ್ಕೂ ತಲೆಕೂದಲಿಗೂ ಇರುವ ವ್ಯತ್ಯಾಸ ಗೊತ್ತಾಗದ, ಕಾಮನ ಸೆನ್ಸ್ ಇಲ್ಲದ ಸಚಿವ, ಸಿದ್ದರಾಮಯ್ಯನವರ ಸಂಪುಟದಲ್ಲಿರುವ ಕಪ್ಪು ಚುಕ್ಕೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
''ಬಸವಣ್ಣ ಜನಿಸಿದ ವಿಜಯಪುರ ಮತ್ತು ಐಕ್ಯಸ್ಥಳವಾದ ಬಾಗಲಕೋಟೆ ಈ ಎರಡು ಅವಳಿ ಜಿಲ್ಲೆಗಳು ಬಸವ ಜಿಲ್ಲೆಗಳಾಗಬೇಕು'' ಎಂದರು. 12ನೇ ಶತಮಾನದಲ್ಲಿ 1,272 ಹಿಂದುಳಿದ ಜಾತಿಗಳನ್ನು ಒಗ್ಗೂಡಿಸಿ ಪ್ರತಿಯೊಬ್ಬರಿಗೂ ವಚನ ರಚಿಸುವ ಅವಕಾಶ ನೀಡಿ, ಅಚ್ಚ ಕನ್ನಡದಲ್ಲಿ ವಚನ ರಚಿಸಿದ ಕೀರ್ತಿ ಬಸಣ್ಣನವರಿಗೆ ಸಲ್ಲುತ್ತದೆ. ಇಂತಹ ಅದ್ಭುತ ವಚನಗಳನ್ನು ನಾವಿಂದು ಹೇಳಬೇಕಾದರೆ ಪ.ಗು. ಹಳಕಟ್ಟಿ ಅವರನ್ನು ಸ್ಮರಿಸಬೇಕು. ಅವರು ಅಳಿದು ಹೋದ ವಚನಗಳನ್ನು ಹುಡುಕಿ ಪರಿಶೀಲಿಸಿ ಮರುಮುದ್ರಣ ಮಾಡಿ ನಮಗೆ ದೊರಕುವಂತೆ ಮಾಡಿದ್ದಾರೆ'' ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ.ಪದ್ಮಿನಿ ನಾಗರಾಜ ಮಾತನಾಡಿ, ''ಕನ್ನಡದ ಸ್ಥಿತಿಗತಿಯ ಪರಿಶೀಲನೆಯ ಜೊತೆಗೆ ಪರಿಹಾರ ಹುಡುಕುವ ಕೆಲಸವಾಗಬೇಕಿದೆ. ಇಂಗ್ಲಿಷ್ ವ್ಯಾಮೋಹ ಹೆಚ್ಚಾಗಿದೆ. ಸೆಕ್ಯೂರಿಟಿ ಗಾರ್ಡ್ ಕೆಲಸಕ್ಕೂ ಇಂಗ್ಲಿಷ್ ಬರೋಲ್ಲ ಅಂದರೆ ಕೆಲಸ ದೊರೆಯುತ್ತಿಲ್ಲ'' ಎಂದು ಅಸಮಾಧಾನ ವ್ಯಕ್ತಪಡಿಸಿದರು.