ಬೆಂಗಳೂರು/ಹೈದರಾಬಾದ್:ಬ್ಯಾಂಕ್‌ಗಳಿಗಿಂತ ಅಧಿಕ ಬಡ್ಡಿ ನೀಡುವುದಾಗಿ ಸಾರ್ವಜನಿಕರಿಂದ ಹಣ ಹೂಡಿಕೆ ಮಾಡಿಸಿ, ಮರು ಪಾವತಿಸದೆ ವಂಚಿಸಿದ ಪ್ರಕರಣದ ಆರೋಪಿ ನೌಹೆರಾ ಶೇಕ್ ಹಾಗೂ ಹೀರಾ ಗ್ರೂಪ್‌ನ ಒಡೆತನದ 27 ಸ್ಥಿರಾಸ್ತಿಯನ್ನ ಜಾರಿ ನಿರ್ದೇಶನಾಲಯ (ಇ.ಡಿ) ಜಪ್ತಿ ಮಾಡಿದೆ.
ಆಸ್ತಿಯ ಪ್ರಸ್ತುತ ಮಾರುಕಟ್ಟೆ ಮೌಲ್ಯ 103.4 ಕೋಟಿ ಎಂದು ಅಂದಾಜಿಸಲಾಗಿದೆ ಎಂದು ಇ.ಡಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
ಐಎಂಎ, ಆ್ಯಂಬಿಡೆಂಟ್ ಕಂಪನಿಗಳ ಹಗರಣದ ಮಾದರಿಯಲ್ಲೇ ಬ್ಯಾಂಕ್‌ಗಳಿಗಿಂತ ಅಧಿಕ ಬಡ್ಡಿ ನೀಡುವುದಾಗಿ ಆಮಿಷವೊಡ್ಡಿದ್ದ ಹೀರಾ ಗೋಲ್ಡ್ ಕಂಪೆನಿ ಕರ್ನಾಟಕ, ಕೇರಳ, ಮಹಾರಾಷ್ಟ್ರ ತೆಲಂಗಾಣ, ದೆಹಲಿ ಸೇರಿದಂತೆ ಅನೇಕ ರಾಜ್ಯಗಳಲ್ಲಿ ನೂರಾರು ಸಾರ್ವಜನಿಕರಿಗೆ ವಂಚಿಸಿತ್ತು ಎಂದು ಇ.ಡಿ ತಿಳಿಸಿದೆ.
ಹೀರಾ ಗೋಲ್ಡ್ ಕಂಪನಿಯ ಮುಖ್ಯಸ್ಥೆಯಾಗಿದ್ದ ನೌಹೆರಾ ಶೇಕ್, ಆಲ್ ಇಂಡಿಯಾ ಮಹಿಳಾ ಎಂಪವರ್ಮೆಂಟ್ ಪಾರ್ಟಿ ಹೆಸರಿನಲ್ಲಿ ಪಕ್ಷ ಸ್ಥಾಪಿಸಿ 2018ರಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಹಣಕಾಸು ವಂಚನೆ ಪ್ರಕರಣ ಬಯಲಾದ ಬಳಿಕ ಇ.ಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿತ್ತು.
ಇದನ್ನೂ ಓದಿ:ಬಿಬಿಎಂಪಿ ಮುಖ್ಯ ಇಂಜಿನಿಯರ್ ಕಚೇರಿ ಮೇಲೆ ಇಡಿ ದಾಳಿ, ದಾಖಲಾತಿ ಪರಿಶೀಲನೆ