ಕರ್ನಾಟಕ

karnataka

ETV Bharat / state

ಬಿಟ್​ಕಾಯಿನ್ ಅಕ್ರಮ ವರ್ಗಾವಣೆ ಆರೋಪ: ಬಂಧನ ಭೀತಿಯಲ್ಲಿ ಡಿವೈಎಸ್​ಪಿ ಶ್ರೀಧರ್ ಪೂಜಾರ್ - Bitcoin Scam

ಹೈಕೋರ್ಟ್​ ತಡೆಯಾಜ್ಞೆ ಆದೇಶ ತೆರವುಗೊಂಡ ಹಿನ್ನೆಲೆಯಲ್ಲಿ ಡಿವೈಎಸ್​ಪಿ ಶ್ರೀಧರ್ ಪೂಜಾರ್​ ಅವರನ್ನು ಬಂಧಿಸಲು ಎಸ್​ಐಟಿ ಅಧಿಕಾರಿಗಳು ಮುಂದಾಗಿದ್ದಾರೆ.

By ETV Bharat Karnataka Team

Published : Jun 3, 2024, 9:11 PM IST

ಬಂಧನ ಭೀತಿಯಲ್ಲಿ ಡಿವೈಎಸ್​ಪಿ ಶ್ರೀಧರ್ ಪೂಜಾರ್
ಸಾಂದರ್ಭಿಕ ಚಿತ್ರ (ETV Bharat)

ಬೆಂಗಳೂರು: ಬಿಟ್​ಕಾಯಿನ್ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ತಮ್ಮನ್ನು ಬಂಧಿಸದಂತೆ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದ ಆರೋಪಿ ಡಿವೈಎಸ್​ಪಿ ಶ್ರೀಧರ್ ಕೆ.ಪೂಜಾರ್​ಗೆ ಬಂಧನ ಭೀತಿ ಎದುರಾಗಿದೆ. ತಡೆಯಾಜ್ಞೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಎಸ್​ಐಟಿ ಅಧಿಕಾರಿಗಳು, ತಡೆಯಾಜ್ಞೆ ಆದೇಶ ತೆರವುಗೊಂಡ ಹಿನ್ನೆಲೆಯಲ್ಲಿ ಬಂಧಿಸಲು ಮುಂದಾಗಿದ್ದಾರೆ.‌ ಸುಪ್ರೀಂ ಕೋರ್ಟ್‌ನಲ್ಲಿ ತಮ್ಮ ವಿರುದ್ಧ ಆದೇಶ ಬರುತ್ತಿದ್ದಂತೆ ಕಳಂಕಿತ ಅಧಿಕಾರಿ ನಾಪತ್ತೆಯಾಗಿದ್ದಾರೆ. ಅಧಿಕಾರಿಯ ಬಂಧನಕ್ಕಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.

ಪ್ರಕರಣದ ವಿವರ: ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಶ್ರೀಧರ್ ಪೂಜಾರ್ ಸೇರಿದಂತೆ‌ ಇನ್ನಿತರರ ಮೇಲೆ ಶ್ರೀಕಿ ಎಂಬಾತನ ಮೂಲಕ ಕ್ರಿಪ್ಟೋ ಕರೆನ್ಸಿ ವರ್ಗಾವಣೆ ಹಾಗೂ ಸಾಕ್ಷ್ಯ ನಾಶಪಡಿಸಿದ‌ ಆರೋಪದಡಿ ಎಫ್ಐಆರ್ ದಾಖಲಾಗಿತ್ತು. ಬಳಿಕ ಇನ್ಸ್​ಪೆಕ್ಟರ್​ ಪ್ರಶಾಂತ್ ಬಾಬು, ಲಕ್ಷ್ಮೀಕಾಂತಯ್ಯ, ಚಂದ್ರಾಧರ್ ಅವರನ್ನು ಬಂಧಿಸಲಾಗಿತ್ತು. ಶ್ರೀಧರ್ ಪೂಜಾರ್ ಬಂಧನಕ್ಕೆ ಮುಂದಾದಾಗ ವಿಧಾನಸೌಧ ಪೊಲೀಸ್ ಠಾಣಾ ವ್ಯಾಪ್ತಿಯ ಸಿವಿಲ್ ಕೋರ್ಟ್ ಸಮೀಪ ಎಸ್ಐಟಿ ತಂಡದ ಕಾರಿಗೆ ವಾಹನದಿಂದ‌ ಡಿಕ್ಕಿ ಹೊಡೆಸಿ ಎಸ್ಕೇಪ್ ಆಗಿದ್ದರು‌. ಈ ಸಂಬಂಧ ಪ್ರತ್ಯೇಕ ಪ್ರಕರಣ ದಾಖಲಾಗಿತ್ತು. ನಿರಂತರವಾಗಿ ಅಧಿಕಾರಿಯನ್ನು ಬಂಧಿಸಲು ಶೋಧ ನಡೆಸಿದರೂ ಪತ್ತೆಯಾಗದೇ ಇದ್ದುದರಿಂದ ನ್ಯಾಯಾಲಯದ ಅನುಮತಿ ಮೇರೆಗೆ 'ಘೋಷಿತ ಅಪರಾಧಿ' ಎಂದು ತೀರ್ಮಾನಿಸಿ ಡಿವೈಎಸ್​ಪಿ ಬಗ್ಗೆ ಸುಳಿವು ನೀಡಿದವರಿಗೆ ಬಹುಮಾನ ನೀಡುವುದಾಗಿ ಎಸ್ಐಟಿ ಪತ್ರಿಕಾ ಪ್ರಕಟಣೆ ಹೊರಡಿಸಿತ್ತು.

ಪ್ರಕರಣ ಸಂಬಂಧ ತಮ್ಮ ವಿರುದ್ಧ ದಾಖಲಾದ ಎಫ್‌ಐಆರ್ ಹಾಗೂ ವಿಚಾರಣಾ ನ್ಯಾಯಾಲಯ ಘೋಷಿತ ಆರೋಪಿ ಎಂದು ವಾರಂಟ್ ಜಾರಿಗೊಳಿಸಿದ್ದನ್ನು ಪ್ರಶ್ನಿಸಿ, ಡಿವೈಎಸ್‌ಪಿ ಶ್ರೀಧರ್ ಕೆ.ಪೂಜಾರ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಮೇ 2ರಂದು ರದ್ದುಪಡಿಸಿತ್ತು. ಆದರೆ, ಎಫ್‌ಐಆರ್‌ ರದ್ದುಪಡಿಸಲು ನಿರಾಕರಿಸಿತ್ತು. ಅಲ್ಲದೇ, ಮೇ 8ರಂದು ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕು ಎಂದು ಹೇಳಿತ್ತು. ಇನ್ನು ಶೀಧರ್​ ತಮ್ಮನ್ನು ಬಂಧಿಸದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದ ಎಸ್ಐಟಿ, ತಡೆಯಾಜ್ಞೆ ಆದೇಶ ರದ್ದುಪಡಿಸುವಲ್ಲಿ ಯಶಸ್ವಿಯಾಗಿದೆ.

ಇದನ್ನೂ ಓದಿ:ಬೆಂಗಳೂರಲ್ಲಿ ರೇವ್ ಪಾರ್ಟಿ ಪ್ರಕರಣ: ತೆಲುಗು ನಟಿ ಹೇಮಾ ಅರೆಸ್ಟ್ - CCB Arrests Actress Hema

ABOUT THE AUTHOR

...view details