ಬೆಂಗಳೂರು:ಬಾತ್ಮೀದಾರನ ಮಾತು ನಂಬಿ ಮಾದಕ ವಸ್ತುಗಳ ಮಾರಾಟ ಪ್ರಕರಣದಲ್ಲಿ ಇಬ್ಬರು ಅಮಾಯಕರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸುವ ಮೂಲಕ ಕರ್ತವ್ಯಲೋಪವೆಸಗಿದ್ದ ನಾಲ್ವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.
ಬನಶಂಕರಿ ಪೊಲೀಸ್ ಠಾಣೆಯ ಪಿಎಸ್ಐ ಶ್ರೀಧರ್ ಗುಗ್ರಿ, ಎಎಸ್ಐ ಎಸ್.ಕೆ.ರಾಜು, ಕಾನ್ಸ್ಟೇಬಲ್ಗಳಾದ ಸತೀಶ್ ಬಗಲಿ ಹಾಗೂ ತಿಮ್ಮಣ್ಣ ಪೂಜಾರ ಅವರನ್ನು ಅಮಾನತುಗೊಳಿಸಿ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಭರಮಪ್ಪ ಜಗಲಾಸರ್ ಆದೇಶಿಸಿದ್ದಾರೆ.
ಆಗಸ್ಟ್ 9ರಂದು ಕದಿರೇನಹಳ್ಳಿಯ ಸಿಮೆಂಟ್ ರಸ್ತೆಯಲ್ಲಿ ಮಾದಕ ಪದಾರ್ಥಗಳ ಮಾರಾಟ ಮಾಡುತ್ತಿದ್ದ ಆರೋಪದಡಿ ಇಬ್ವರು ವ್ಯಕ್ತಿಗಳನ್ನು ಬನಶಂಕರಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದರು. ಆರೋಪಿತರು ದ್ವಿಚಕ್ರ ವಾಹನದಲ್ಲಿ ಬಚ್ಚಿಡಲಾಗಿದ್ದ 400ಕ್ಕೂ ಅಧಿಕ ಗ್ರಾಂ ತೂಕದ ಮಾದಕ ಪದಾರ್ಥಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿತ್ತು.
ಆರೋಪಿಗಳ ಬಂಧನದಿಂದ ಕಂಗಾಲಾದ ಕುಟುಂಬಸ್ಥರು ಬಂಧಿತರಿಬ್ಬರೂ ನಿರಪರಾಧಿಗಳು, ಪ್ರಕರಣದಲ್ಲಿ ಪೊಲೀಸ್ ಬಾತ್ಮೀದಾರನಾಗಿದ್ದ ರಾಜನ್ ಎಂಬಾತನ ಕೈವಾಡವಿದೆ ಎಂದು ಅನುಮಾನ ವ್ಯಕ್ತಪಡಿಸಿ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. ಪ್ರಕರಣದ ಕೂಲಂಕುಷ ತನಿಖೆ ನಡೆಸಿ ವರದಿ ನೀಡುವಂತೆ ಸುಬ್ರಹ್ಮಣ್ಯಪುರ ಉಪವಿಭಾಗದ ಎಸಿಪಿ ಗಿರೀಶ್ ಅವರಿಗೆ ದಕ್ಷಿಣ ವಿಭಾಗದ ಡಿಸಿಪಿಯವರು ಆದೇಶಿಸಿದ್ದರು.
ತನಿಖೆ ನಡೆಸಿದ್ದ ಎಸಿಪಿ ಗಿರೀಶ್, ಪ್ರಕರಣದಲ್ಲಿ ಬಾತ್ಮೀದಾರನ ಸುಳ್ಳು ಮಾಹಿತಿ ಹಾಗೂ ಪೊಲೀಸ್ ಸಿಬ್ಬಂದಿಯ ಕರ್ತವ್ಯಲೋಪ ಇರುವುದರ ಕುರಿತು ಸೆಪ್ಟೆಂಬರ್ 12ರಂದು ಡಿಸಿಪಿಯವರಿಗೆ ವರದಿ ನೀಡಿದ್ದರು. ಅದರನ್ವಯ ನಾಲ್ವರು ಸಿಬ್ಬಂದಿಯನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ.
"ಹಲವು ವರ್ಷಗಳಿಂದ ಪೊಲೀಸ್ ಬಾತ್ಮೀದಾರ ರಾಜನ್, ಪ್ರಕರಣದಲ್ಲಿ ಬಂಧಿತರಾಗಿದ್ದ ಇಬ್ಬರು ವ್ಯಕ್ತಿಗಳೊಂದಿಗೆ ವೈಯಕ್ತಿಕ ದ್ವೇಷ ಹೊಂದಿದ್ದ. ಇಬ್ಬರನ್ನೂ ಪ್ರಕರಣದಲ್ಲಿ ಸಿಲುಕಿಸಲು ಸಂಚು ರೂಪಿಸಿ ತನ್ನ ಸ್ನೇಹಿತೆಯ ಮೂಲಕ ಅವರ ದ್ವಿಚಕ್ರ ವಾಹನದಲ್ಲಿ ಮಾದಕ ಪದಾರ್ಥ ಇರಿಸಿದ್ದ. ನಂತರ ಪೊಲೀಸರಿಗೆ ಮಾಹಿತಿ ನೀಡಿ ದಾಳಿ ಮಾಡಿಸಿದ್ದ. ಬಾತ್ಮೀದಾರ ರಾಜನ್ ಮಾಹಿತಿಯನ್ನು ಪರಿಶೀಲಿಸದೆಯೇ ಪೊಲೀಸರು ಇಬ್ಬರೂ ಅಮಾಯಕರನ್ನು ಬಂಧಿಸಿದ್ದರು. ಸದ್ಯ ಸುಳ್ಳು ಮಾಹಿತಿ ನೀಡಿದ್ದ ರಾಜನ್ ಹಾಗೂ ಚೈತ್ರಾ ಎಂಬುವರನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಸಿಬ್ಬಂದಿ ಲಾಭ ಪಡೆದಿರುವುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಇದನ್ನೂ ಓದಿ:ಉಡುಪಿ: ಕೋಟ ಠಾಣೆ ಎಸ್ಐ ಗುರುನಾಥ ಹಾದಿಮನಿ ಅಮಾನತು