ಬೆಂಗಳೂರು: ಬೀದಿ ನಾಯಿ ಮೇಲೆ ಕಾರು ಹರಿಸಿ ವಿಕೃತಿ ಮೆರೆದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಜ.4 ರಂದು ಸಹಕಾರನಗರದ ಎಫ್ ಬ್ಲಾಕ್‌ನ 14ನೇ ಮುಖ್ಯರಸ್ತೆಯಲ್ಲಿ ಘಟನೆ ನಡೆದಿದ್ದು, ದೀಪಕ್ ಧನಂಜಯ್ ಶೋಧನ್ ಎಂಬುವವರು ನೀಡಿದ ದೂರಿನ ಅನ್ವಯ ಆರೋಪಿ ಥಾರ್ ಕಾರು ಚಾಲಕನ ವಿರುದ್ಧ ಹೆಬ್ಬಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜ.4ರ ರಾತ್ರಿ ವೇಗವಾಗಿ ಬಂದ ಥಾರ್ ಚಾಲಕ, ರಸ್ತೆಯಲ್ಲಿ ತಮ್ಮ ಪಾಡಿಗೆ ತಾವು ಮಲಗಿದ್ದ ನಾಯಿಮರಿಗಳತ್ತ ಕಾರು ನುಗ್ಗಿಸಿದ್ದಾನೆ. ಈ ವೇಳೆ ಕಾರಿನ ಚಕ್ರಕ್ಕೆ ಸಿಕ್ಕ ನಾಯಿಯೊಂದು ಸ್ಥಳದಲ್ಲೇ ಒದ್ದಾಡಿ ಬಳಿಕ ಪಕ್ಕದ ಚರಂಡಿಯಲ್ಲಿ ಪ್ರಾಣಬಿಟ್ಟಿದೆ. ನಾಯಿಗಳಿಗೆ ಊಟ ಹಾಕುತ್ತಿದ್ದ ಅಕ್ಕಪಕ್ಕದವರು ಸಿಸಿಟಿವಿ ದೃಶ್ಯಗಳನ್ನ ಪರಿಶೀಲಿಸಿದಾಗ ಥಾರ್ ಚಾಲಕನ ಕೃತ್ಯ ಬೆಳಕಿಗೆ ಬಂದಿದೆ.
ಘಟನೆಗೆ ಸ್ಥಳೀಯ ನಿವಾಸಿಗಳು, ಪ್ರಾಣಿ ಪ್ರಿಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳೀಯರಾದ ದೀಪಕ್ ಧನಂಜಯ್ ಶೋಧನ್ ನೀಡಿದ ದೂರಿನ ಅನ್ವಯ ಜ.14 ರಂದು ಹೆಬ್ಬಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.