ಧಾರವಾಡ:''ಮೇ 14ರಿಂದ 23 ರ ವರೆಗೆ ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ಹಾಗೂ ನರಗುಂದ ಶಾಖಾ ಕಾಲುವೆ ಮೂಲಕ ನವಲಗುಂದ ಅಣ್ಣಿಗೇರಿ, ಹುಬ್ಬಳ್ಳಿ ಹಾಗೂ ಕುಂದಗೋಳ ತಾಲೂಕು ವ್ಯಾಪ್ತಿಯ 58 ಕುಡಿಯುವ ನೀರಿನ ಕೆರೆಗಳನ್ನು ತುಂಬಿಸಲಾಗುವುದು'' ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷೆ ಹಾಗೂ ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಈ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು, ''ಬರಗಾಲದ ನಡುವೆ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಜನ, ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ 10 ದಿನಗಳ ಕಾಲ ನಿರಂತರ ಮಲಪ್ರಭಾ ಬಲದಂಡೆ ಕಾಲುವೆಗಳಿಂದ 0.5 ಟಿಎಂಸಿ (600 ಕ್ಯೂಸೆಕ್) ನೀರನ್ನು ನಾಲ್ಕು ತಾಲೂಕುಗಳ 58 ಕೆರೆಗಳಿಗೆ ಬಿಡಲಾಗುವುದು. ನವಲಗುಂದ ತಾಲೂಕಿನ 37 ಕೆರೆ, ಅಣ್ಣಿಗೇರಿಯ 13, ಹುಬ್ಬಳ್ಳಿಯ 7 ಹಾಗೂ ಕುಂದಗೋಳದ 3 ಪೂರಕ ಸಂಗ್ರಹಣಾ ಕೆರೆಗಳನ್ನು ಭರ್ತಿ ಮಾಡಲಾಗುವುದು. ಆಯಾ ತಾಲೂಕಿನ ತಹಶೀಲ್ದಾರರು, ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ, ನೀರಾವರಿ ಇಲಾಖೆ ಎಇಇಗಳು ಕ್ರಿಯಾಶೀಲರಾಗಿ ನಿಗಾವಹಿಸಬೇಕು'' ಎಂದು ಸೂಚನೆ ನೀಡಿದ್ದಾರೆ.
''ಕಾಲುವೆಗೆ ಹರಿಸಲಾದ ನೀರು ಕೇವಲ ಕುಡಿಯುವ ನೀರಿಗೆ ಮಾತ್ರ ಬಳಕೆಯಾಗತಕ್ಕದ್ದು ಕುಡಿಯುವ ನೀರು ಹೊರತುಪಡಿಸಿ ಇನ್ಯಾವುದೇ ಉದ್ದೇಶಕ್ಕಾಗಿ ಬಳಕೆಯಾಗದಂತೆ ಸಂಬಂಧಿಸಿದ ಅಧಿಕಾರಿಗಳು ತೀವ್ರ ನಿಗಾ ವಹಿಸತಕ್ಕದ್ದು'' ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ''ನೀರಾವರಿ ಇಲಾಖೆ, ಕಂದಾಯ ಇಲಾಖೆ, ಹೆಸ್ಕಾಂ, ಪೊಲೀಸ್ ಹಾಗೂ ಗ್ರಾಮೀಣ ಕುಡಿಯುವ ನೀರು ವಿಭಾಗಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೂರು ತಂಡಗಳನ್ನು ಮೂರು ಶಿಫ್ಟ್ಗಳಲ್ಲಿ ಕಾರ್ಯನಿರ್ವಹಿಸಲು ಸೂಚಿಸಲಾಯಿತು. ಎಲ್ಲರೂ ಒಬ್ಬರಿಗೊಬ್ಬರು ಸಹಕಾರದೊಂದಿಗೆ ನಾಲ್ಕು ತಾಲೂಕುಗಳ 7 ಉಪ ವಿಭಾಗಗಳ ಸುಮಾರು 90 ಕಿ.ಮೀ ವ್ಯಾಪ್ತಿಯ ಕಾಲುವೆ ಸುತ್ತ ಯಾವುದೇ ತೊಂದರೆಯಾಗದಂತೆ ನಿಗಾ ವಹಿಸಿ ಕ್ರಿಯಾಶೀಲರಾಗಿ ಕೆಲಸ ಮಾಡಬೇಕು'' ಎಂದು ತಿಳಿಸಿದರು.