ಬೆಂಗಳೂರು: ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಯಾವುದೇ ತೊಂದರೆ ಆಗದಂತೆ ಎಚ್ಚರಿಕೆ ವಹಿಸಬೇಕೆಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ವಿಕಾಸಸೌಧದಲ್ಲಿ ಇಂದು ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಕುಡಿಯುವ ನೀರಿನ ಸಮಸ್ಯೆಯನ್ನು ಕಡೆಗಣಿಸಿದರೆ ಸಂಬಂಧಪಟ್ಟ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಯೊಂದು ಜಿಲ್ಲೆಯಲ್ಲೂ ಬರ ಪರಿಸ್ಥಿತಿ, ಬೆಳೆ ನಷ್ಟ, ಕುಡಿಯುವ ನೀರಿನ ಸಮಸ್ಯೆ, ಮೇವಿನ ಕೊರತೆ, ಉದ್ಯೋಗ ಸೃಜನೆ ಸೇರಿದಂತೆ ಹಲವು ವಿಚಾರಗಳಲ್ಲಿ ಜಿಲ್ಲಾಡಳಿತಗಳು ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಸಚಿವರು ಮಾಹಿತಿ ಪಡೆದುಕೊಂಡರು. ಕೆಲವು ಜಿಲ್ಲೆಗಳು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಮತ್ತಷ್ಟು ಗಂಭೀರ ಕ್ರಮಗಳನ್ನು ಕೈಗೊಳ್ಳಬೇಕು. ಕಲಬುರಗಿ, ರಾಯಚೂರು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಜನ ಗಂಭೀರ ಸಮಸ್ಯೆ ಅನುಭವಿಸುತ್ತಿರುವುದು ವರದಿಯಾಗಿದೆ. ತಾಲೂಕು ಹಾಗೂ ಜಿಲ್ಲಾಡಳಿತ ಅಧಿಕಾರಿಗಳು ಇಂತಹ ಸಮಸ್ಯೆಗಳನ್ನು ಮುಂಚಿತವಾಗಿ ಗುರುತಿಸಿ ಜನರಿಗೆ ನೆರವಾಗಲು ಕ್ರಮ ಕೈಗೊಳ್ಳುವಂತೆ ಸಚಿವರು ಸೂಚನೆ ನೀಡಿದ್ದಾರೆ.
ಕುಡಿವ ನೀರು ಪೂರೈಕೆ:ಫೆ.28ರ ವರೆಗಿನ ಮಾಹಿತಿ ಪ್ರಕಾರ, 117 ಗ್ರಾಮಗಳಿಗೆ 181 ಟ್ಯಾಂಕರ್ ಮೂಲಕ ಹಾಗೂ 354 ಗ್ರಾಮಗಳಿಗೆ 419 ಖಾಸಗಿ ಬೋರ್‍ವೆಲ್‍ಗಳನ್ನು ಬಾಡಿಗೆ ಆಧಾರದ ಮೇಲೆ ಪಡೆದು ನೀರು ಪೂರೈಸಲಾಗುತ್ತಿದೆ. 9 ನಗರ ಸ್ಥಳೀಯ ಸಂಸ್ಥೆಗಳಲ್ಲಿನ 57 ವಾರ್ಡ್‍ಗಳಿಗೆ 17 ಟ್ಯಾಂಕರ್ಗಳ ಮೂಲಕ ಹಾಗೂ 29 ವಾರ್ಡ್‍ಗಳಿಗೆ 17 ಖಾಸಗಿ ಬೋರ್ವೆಲ್ ಗಳ ಮೂಲಕ ತುರ್ತು ಕುಡಿಯುವ ನೀರು ಪೂರೈಸಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.
ಮುಂದಿನ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಬಹುದಾದ ಒಟ್ಟು 7,412 ಗ್ರಾಮಗಳನ್ನು ಹಾಗೂ 1,115 ವಾರ್ಡ್‍ಗಳನ್ನು ಗುರುತಿಸಲಾಗಿದೆ. ಮುಂಜಾಗ್ರತೆ ಕ್ರಮವಾಗಿ ಒಟ್ಟು 7108 ಖಾಸಗಿ ಬೋರ್ ವೆಲ್‍ಗಳನ್ನು ಗುರುತಿಸಲಾಗಿದೆ. ಪ್ರಸಕ್ತ ಸಾಲಿನ ಪ್ರಕೃತಿ ವಿಕೋಪ ಪರಿಹಾರದಡಿ ರೂ.930.14 ಕೋಟಿ ಹಂಚಿಕೆಯಾಗಿದ್ದು, ಇದರ ಪೈಕಿ ಕೇಂದ್ರದ ಪಾಲು 697.60 ಕೋಟಿ ರೂ. ಹಾಗೂ ರಾಜ್ಯದ ಪಾಲು 232.54 ಕೋಟಿ ರೂ. ಇರುತ್ತದೆ.
ಈ ಅನುದಾನದ ಜೊತೆಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿ ಅನುದಾನ 885.67 ಕೋಟಿ ರೂ. ಸೇರಿದಂತೆ ಒಟ್ಟು 1810.81 ಕೋಟಿ ರೂ. ಸಂಪೂರ್ಣ ಅನುದಾನವನ್ನು ಬಿಡುಗಡೆಗೊಳಿಸಲು ಆರ್ಥಿಕ ಇಲಾಖೆ ಸಹಮತ ನೀಡಿದ್ದು, ಈ ವರೆಗೆ 1602.45 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಜಿಲ್ಲಾಧಿಕಾರಿಗಳ ಖಾತೆಯಲ್ಲಿ 725.92 ಕೋಟಿ ರೂ. ತಹಸೀಲ್ದಾರ್ ಖಾತೆಯಲ್ಲಿ 135.40 ಕೋಟಿ ರೂ. ಸೇರಿದಂತೆ ಒಟ್ಟು 861.32 ಕೋಟಿ ರೂ. ಅನುದಾನವು ಬರ ಪರಿಹಾರ ಕಾರ್ಯ ಕೈಗೆತ್ತಿಕೊಳ್ಳಲು ಲಭ್ಯವಿದೆ ಎಂದು ಸಚಿವರು ತಿಳಿಸಿದ್ದಾರೆ.
ವಾಟರ್ ಟ್ಯಾಂಕರ್ಗಳಿಗೆ ನಿಗದಿತ ದರ ಫಿಕ್ಸ್:ನಂತರ ಸುದ್ದಿಗಾರರೊಂದಿಗೆ ಸಚಿವ ಕೃಷ್ಣಭೈರೇಗೌಡ ಮಾತನಾಡಿ, ವಾಟರ್ ಟ್ಯಾಂಕರ್ಗಳಿಗೆ ನಿಗದಿತ ದರ ಫಿಕ್ಸ್ ಮಾಡುವ ಬಗ್ಗೆ ಸಿದ್ದತೆ ನಡೆಯುತ್ತಿದೆ. ಒಂದು ಗೈಡೆನ್ಸ್ ವ್ಯಾಲ್ಯೂ ಫಿಕ್ಸ್ ಮಾಡುವ ಬಗ್ಗೆ ಬಿಬಿಎಂಪಿ ಕೆಲಸ ಮಾಡುತ್ತಿದೆ. ಬಿಬಿಎಂಪಿ ರೈಟ್ ಟ್ರ್ಯಾಕ್ ನಲ್ಲಿ ಇದೆ. ಅದಕ್ಕಾಗಿ ನಾವು ಮಧ್ಯಪ್ರವೇಶ ಮಾಡುವುದು ಬೇಡ ಎಂದು ಸುಮ್ಮನಿದ್ದೇವೆ ಎಂದು ಹೇಳಿದರು.
ರಾಜ್ಯದಲ್ಲಿ ಬರದ ಪರಿಸ್ಥಿತಿ ಇಷ್ಟು ದಿನ ಹತೋಟಿಯಲ್ಲಿ ಇತ್ತು. ಇನ್ನು ಮುಂದೆ ಇನ್ನಷ್ಟು ಸಮಸ್ಯೆ ಆಗಬಹುದು. ಕುಡಿಯುವ ನೀರು, ಮೇವು ಸರಿಯಾಗಿ ನೋಡಿಕೊಳ್ಳಲು ಡಿಸಿಗಳಿಗೆ ಸೂಚನೆ ನೀಡಲಾಗಿದೆ. ಯಾವುದಾದರೂ ಊರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಬಂದರೆ 24 ಗಂಟೆ ಒಳಗೆ ವ್ಯವಸ್ಥೆ ಮಾಡಲು ಸಿಎಂ ಗಡುವು ನೀಡಿದ್ದಾರೆ. ಗ್ರಾಪಂ ಮಟ್ಟದಲ್ಲಿ ಟ್ಯಾಂಕರ್ ಗಳ ಟೆಂಡರ್ ಮಾಡಿ ಇಟ್ಟುಕೊಳ್ಳಲು ಸೂಚಿಸಲಾಗಿದೆ. ಟ್ಯಾಂಕರ್ ನೀರಿನ ಸಪ್ಲೈ ಕೊಟ್ಟರೆ ಜನರಿಗೆ ಎಷ್ಟೇ ಆದ್ರೂ ಸಮಾಧಾನ ಆಗುವುದಿಲ್ಲ. ಖಾಸಗಿ ಬೋರ್ವೆಲ್ಗಳ ಮೂಲಕ ನೀರು ಪೂರೈಕೆ ಮಾಡಲು ಸೂಚಿಸಿದ್ದೇವೆ ಎಂದು ತಿಳಿಸಿದರು.
ಸರ್ವೆಯರ್ಗಳ ನೇಮಕ:991 ಪರವಾನಗಿ ಸರ್ವೆಯರ್ಗಳನ್ನು ಎಲ್ಲ ಜಿಲ್ಲೆಗಳಿಗೆ ಒದಗಿಸುತ್ತಿದ್ದೇವೆ. 364 ಸರ್ಕಾರಿ ಸರ್ವೆಯರ್ ನೇಮಕಾತಿ ಮಾಡುತ್ತಿದ್ದೇವೆ. ಮೇಲುಸ್ತುವಾರಿಗೆ 27 ಸರ್ವೇ ಅಸಿಸ್ಟಂಟ್ ಲ್ಯಾಂಡ್ ರೆಕಾರ್ಡ್ಸ್ ಗಳ ನೇಮಕ ಮಾಡುತ್ತಿದ್ದೇವೆ. ಆಧುನಿಕ ಸರ್ವೇ ಉಪಕರಣಗಳ ಖರೀದಿ ಮಾಡಿ ಎಲ್ಲ ತಾಲೂಕುಗಳಿಗೆ ನೀಡುತ್ತಿದ್ದೇವೆ. 18 ಕೋಟಿ ವೆಚ್ಚದಲ್ಲಿ ಸರ್ವೇ ರೋವರ್ ಉಪಕರಣಗಳ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಆಕಾರ್ ಬಂದ್ ಡಿಜಿಟಲೈಸೆಷನ್ ಮಾಡುವುದಕ್ಕೆ ಸೂಚನೆ ನೀಡಲಾಗಿದೆ. 65 ಲಕ್ಷ ಆರ್ಟಿಸಿಯ ಆಕಾರ್ ಬಂದ್ ಡಿಜಿಟಲೈಸ್ ಮಾಡುವುದಕ್ಕೆ ಸೂಚನೆ ನೀಡಲಾಗಿದೆ. ಎರಡು ತಿಂಗಳಲ್ಲಿ ಪೂರ್ಣಗೊಳಿಸಲು ಸೂಚನೆ ನೀಡಲಾಗಿದ್ದು, 66 ಸಾವಿರ ಸರ್ಕಾರಿ ಸರ್ವೆ ನಂಬರ್ ಗಳಲ್ಲಿ ಭೂ ಮಂಜೂರಾತಿ ಆಗಿದೆ. ದುರಸ್ತಿಗೆ ಇನ್ನೂ ಲಕ್ಷಾಂತರ ಪ್ರಕರಣ ಬಾಕಿ ಇರಬಹುದು. 66 ಸಾವಿರ ಸರ್ವೆ ಮಂಜೂರಾಗಿದ್ದು, ಕನಿಷ್ಠ 20 ಸಾವಿರ ಸರ್ವೆ ನಂಬರ್ಗೆ ಒನ್ ಟು ಫೈವ್ ನಮೂನೆ ಮಾಡಬೇಕು. ಇದು ಆದರೆ ಮುಂದೆ ಆಕಾರ್ ಬಂದ್ ಸೇರಿ ಎಲ್ಲಾ ಸರ್ವೆ ಕೆಲಸ ಸುಲಭವಾಗಲಿದೆ ಎಂದು ಹೇಳಿದರು.
ಇದನ್ನೂಓದಿ:ಜಾತಿ ಗಣತಿ ವರದಿ ಸ್ವೀಕರಿಸುವುದು ಬೇರೆ, ಒಪ್ಪುವುದು ಬೇರೆ: ಸಚಿವ ಸತೀಶ ಜಾರಕಿಹೊಳಿ