ಹಾವೇರಿ: ಸರ್ಕಾರದ ಸಹಾಯಧನ ಮತ್ತು ಕಲಾಭಿಮಾನಿಗಳು ನೀಡುವ ಪ್ರೋತ್ಸಾಹದಿಂದ ರಾಜ್ಯದಲ್ಲಿ ಹಲವು ನಾಟಕ ಕಂಪನಿಗಳು ಕಲಾಸೇವೆ ಮುಂದುವರಿಸಿವೆ. ಕೆಲ ನಾಟಕ ಕಂಪನಿಗಳಿಗೆ ಸರ್ಕಾರದ ಸಹಾಯಧನ ಸಿಕ್ಕರೆ, ಹಲವರಿಗೆ ಸಿಗುವುದಿಲ್ಲ. ಅದಾಗ್ಯೂ ಕಲಾಭಿಮಾನಿಗಳ ಪ್ರೋತ್ಸಾಹದಿಂದ ನಾಟಕ ಕಂಪನಿಗಳು ತಮ್ಮ ಕಲಾಸೇವೆ ಮುಂದುವರಿಸಿವೆ.
ಈ ನಾಟಕ ಕಂಪನಿಗಳು ಕಲಾಭಿಮಾನಿಗಳನ್ನು ಪ್ರಮುಖವಾಗಿ ಅವಲಂಬಿಸಿದೆ. ಜಾತ್ರೆಗಳೇ ಇವರಿಗೆ ಮೂಲ. ಅದರಲ್ಲೂ ರಾಜ್ಯದ ಪ್ರಮುಖ ಜಾತ್ರೆಗಳಾದ ಬಾಗಲಕೋಟೆ ಜಿಲ್ಲೆಯ ಬಾದಾಮಿ ಬನಶಂಕರಿ ಜಾತ್ರೆ, ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರದ ಮೈಲಾರಲಿಂಗೇಶ್ವರ ಜಾತ್ರೆ, ಕೊಟ್ಟೂರು ಜಾತ್ರೆ ಮತ್ತು ಶಿರಸಿ ಮಾರಿಕಾಂಬಾ ಜಾತ್ರೆಗಳಲ್ಲಿ ಹೆಚ್ಚಿನ ನಾಯಕ ಪ್ರದರ್ಶನಗಳು ನಡೆಯುತ್ತವೆ. ಅದರಲ್ಲೂ ಬನಶಂಕರಿಯಲ್ಲಿ 10ಕ್ಕೂ ಅಧಿಕ ನಾಟಕ ಕಂಪನಿಗಳು ಟೆಂಟ್ ಹಾಕಿರುತ್ತವೆ. ಇಲ್ಲಿ ಹಲವು ಹೊಸ ನಾಟಕಗಳನ್ನು ಪ್ರಸ್ತುತ ಪಡಿಸುತ್ತವೆ. ಇಲ್ಲಿ ಕಲಾಭಿಮಾನಿಗಳು ಪ್ರೋತ್ಸಾಹ ನೀಡಿದರೆ, ರಾಜ್ಯದೆಲ್ಲೆಡೆ ಕಲಾಭಿಮಾನಿಗಳು ಪ್ರೋತ್ಸಾಹಿಸುತ್ತಾರೆ ಎಂಬ ನಂಬಿಕೆ ನಾಟಕ ಕಂಪನಿಯ ಮಾಲೀಕರದ್ದು.
ಇದೀಗ ಮೈಲಾರ ಗ್ರಾಮದ ಮೈಲಾರಲಿಂಗೇಶ್ವರ ಜಾತ್ರೆ ನಡೆಯುತ್ತಿದ್ದು, ಇಲ್ಲಿ ಸುಮಾರು ಆರು ನಾಟಕ ಕಂಪನಿಗಳು ಟೆಂಟ್ ಹಾಕಿವೆ. ದಾವಣಗೆರೆಯ ಕೆ.ಬಿ.ಆರ್ ಡ್ರಾಮಾ ಕಂಪನಿ, ಕಮತಗಿಯ ಹೊಳೆ ಹುಚ್ಚೇಶ್ವರ ನಾಟಕ ಕಂಪನಿ, ಜೀವರ್ಗಿ ನಾಟಕ ಕಂಪನಿ ಸೇರಿದಂತೆ ಆರು ನಾಟಕ ಕಂಪನಿಗಳು ಮೈಲಾರದಲ್ಲಿ ಟೆಂಟ್ ಹಾಕಿವೆ. ಕಲಾಭಿಮಾನಿಗಳನ್ನು ಸೆಳೆಯಲು ತರಹೇವಾರಿ ಹೆಸರುಗಳ ನಾಟಕಗಳನ್ನು ಪ್ರಸ್ತುತಪಡಿಸುತ್ತಿದೆ.
ಕೆಬಿಆರ್ ಡ್ರಾಮಾ ಕಂಪನಿ ಕಳೆದ 62 ವರ್ಷಗಳಿಂದ ಮೈಲಾರ ಜಾತ್ರೆಗೆ ಆಗಮಿಸಿ ನಾಟಕ ಪ್ರದರ್ಶಿಸುತ್ತಿವೆ. ಈ ವರ್ಷ ಸಹ ಕೆ.ಬಿ.ಆರ್ ಡ್ರಾಮಾ ಕಂಪನಿ ಮೈಲಾರ ಜಾತ್ರೆಯಲ್ಲಿ ಟೆಂಟ್ ಹಾಕಿದ್ದು, ನೀ ಬಾ ನಾನು ಬರ್ತೇನೆ ಎಂಬ ಸಾಮಾಜಿಕ ಹಾಸ್ಯ ನಾಟಕ ಪ್ರದರ್ಶಿಸುತ್ತಿದೆ. ಇನ್ನು ಕಮತಗಿ ನಾಟಕ ಕಂಪನಿ 'ನಾ ಡ್ರೈವರ್ ಆಕಿ ನನ್ನ ಲವರ್' ಅರ್ಥಾತ್ 'ಕರಿಮಣಿ ಮಾಲೀಕ ನೀನಲ್ಲ' ಹೆಸರಿನ ನಾಟಕ ಪ್ರದರ್ಶಿಸುತ್ತಿದೆ. 'ಗಂಗೆ ಮನ್ಯಾಗ ಗೌರಿ ಹೊಲ್ದಾಗ', 'ಸೆರೆದಂಗಡಿ ಸಂಗವ್ವ', 'ಅಪ್ಪ ಹಂಗ ಮಗ ಹಿಂಗ' ಸೇರಿದಂತೆ ವಿವಿಧ ನಾಟಕಗಳನ್ನು ಈ ಕಂಪನಿಗಳು ಪ್ರದರ್ಶಿಸುತ್ತಿವೆ.