ಬೆಂಗಳೂರು:ಪ್ರೌಢಶಾಲೆಯಲ್ಲಿರುವ ಮಗು ದಿನಕ್ಕೆ ಸರಾಸರಿ 10ರಿಂದ 14 ಗಂಟೆಗಳ ಕಾಲ ಓದುವುದು ಅಥವಾ ಬರೆಯುವುದರಲ್ಲಿ ಕಳೆಯುತ್ತದೆ. ಪರೀಕ್ಷೆಗಳ ಸಮಯದಲ್ಲಿ 16 ಗಂಟೆಗಳವರೆಗೆ ಅದು ಹೆಚ್ಚಾಗಬಹುದು. ಶೈಕ್ಷಣಿಕ ಯಶಸ್ಸಿಗೆ ಪರಿಪೂರ್ಣ ದೃಷ್ಟಿ ಅತ್ಯಗತ್ಯವಾದರೂ ಕಣ್ಣಿನಲ್ಲಿರುವ ಅನೇಕ ಅಂಶಗಳ ಕಡೆಗೆ ಗಮನಹರಿಸಬೇಕು. ಏಕಾಗ್ರತೆಯಿಂದ ಓದುವುದರಿಂದ ವಕ್ರೀಕಾರಕ ದೋಷಗಳು ಕಂಡು ಬರುವ ಸಾಧ್ಯತೆ ಇದೆ. ಇದರಿಂದ ದೃಷ್ಟಿಯ ಮೇಲೆ ಪರಿಣಾಮ ಬೀರಬಹುದು ಎಂದು ನಾರಾಯಣ ನೇತ್ರಾಲಯದ ಅಧ್ಯಕ್ಷ ಡಾ.ರೋಹಿತ್ ಶೆಟ್ಟಿ ಹೇಳಿದ್ದಾರೆ.
ಶುಕ್ರವಾರ ನಾರಾಯಣ ನೇತ್ರಾಲಯದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅಕೊಮ್ಮೊಡೇಟಿವ್ ಸ್ಪಾಸಂ, ಅಕೊಮ್ಮೊಡೇಟಿವ್ ಇನ್‌ಫೆಸಿಲಿಟಿ, ಕನ್ವರ್ಜೆನ್ಸ್ ಇನ್‌ಸಫಿಷ್ಯಂನ್ಸಿ, ಸ್ಯೂಡೋಮಯೋಪಿಯಾ ಮತ್ತು ಸಮೀಪದೃಷ್ಟಿಯ ಹೆಚ್ಚಳದಂತಹ ಸಾಮಾನ್ಯ ಸಮಸ್ಯೆಗಳು ಮಗುವಿನ ಕಾರ್ಯಕ್ಷಮತೆಯ ಮೇಲೆ ಗಮನಾರ್ಹ ಪರಿಣಾಮ ಬೀರುತ್ತವೆ ಎಂದರು.
ನಿದ್ರಾಹೀನತೆ:ಕಣ್ಣಿನ ಸಮಸ್ಯೆಗಳಿರುವ ಶೇ.50ಕ್ಕಿಂತ ಹೆಚ್ಚು ರೋಗಿಗಳು 10 ನೇಯ ತರಗತಿ, ಪಿ.ಯು.ಸಿ ಅಥವಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವವರಾಗಿರುತ್ತಾರೆ. ದುರದೃಷ್ಟವಶಾತ್ ಶೇಕಡಾ 95 ರಷ್ಟು ದೃಷ್ಟಿ ಕೇಂದ್ರೀಕರಿಸುವ ಸಮಸ್ಯೆಗಳು ಅಥವಾ ಬೈನಾಕ್ಯುಲರ್ ದೃಷ್ಟಿ ವೈಪರೀತ್ಯಗಳು ಸಾಮಾನ್ಯ ಕಣ್ಣಿನ ಪರೀಕ್ಷೆಗಳಲ್ಲಿ ಕಂಡುಬರುವುದಿಲ್ಲ. ಇದನ್ನು ಗಮನಿಸದೇ ಬಿಟ್ಟಲ್ಲಿ, ಈ ಸಮಸ್ಯೆಗಳು ಕಣ್ಣಿನ ಆಯಾಸ, ದೌರ್ಬಲ್ಯ, ಕಳಪೆ ಏಕಾಗ್ರತೆ, ಆಗಾಗ ತಲೆನೋವು, ಎರಡೆರಡು ದೃಷ್ಟಿ ಮತ್ತು ಮಸುಕಾದ ದೃಷ್ಟಿ ಮುಂತಾದ ರೋಗಲಕ್ಷಣಗಳಿಗೆ ಕಾರಣವಾಗಬಹುದು. ಕೇಂದ್ರೀಕರಿಸುವ ಸಮಸ್ಯೆಗಳು ಮತ್ತು ಬೈನಾಕ್ಯುಲರ್ ದೃಷ್ಟಿ ವೈಪರೀತ್ಯಗಳ ಜೊತೆಗೆ ಡಿಜಿಟಲ್ ಪರದೆಗಳ ಅತಿಯಾದ ಬಳಕೆ ಮತ್ತು ಆನ್‌ಲೈನ್ ಅಧ್ಯಯನ ಸಾಮಗ್ರಿಗಳನ್ನು ಬಳಸುವುದರಿಂದ ಶುಷ್ಕ ಕಣ್ಣುಗಳು, ಸಮೀಪದೃಷ್ಟಿಯ ಹೆಚ್ಚಾಗುವಿಕೆ ಮತ್ತು ನಿದ್ರಾಹೀನತೆ ಕಂಡು ಬರುತ್ತದೆ ಎಂದು ತಿಳಿಸಿದರು.
ಈ ರೋಗಲಕ್ಷಣಗಳನ್ನು ಸಾಮಾನ್ಯವಾಗಿ ಪೋಷಕರು ಅಥವಾ ಶಿಕ್ಷಕರು ಅಧ್ಯಯನದಲ್ಲಿ ನಿರಾಸಕ್ತಿ ಎಂದು ತಪ್ಪಾಗಿ ಅರ್ಥೈಸುತ್ತಾರೆ. ಇದು ಮಕ್ಕಳಲ್ಲಿ ಆತ್ಮವಿಶ್ವಾಸದ ಕೊರತೆ ಮತ್ತು ಅತಿಯಾದ ಹೊರೆಯ ಭಾವನೆಗೆ ಕಾರಣವಾಗುತ್ತದೆ. ಸಾಂಪ್ರದಾಯಿಕ ಕಣ್ಣಿನ ತಪಾಸಣೆಗಳು ಸಾಮಾನ್ಯವಾಗಿ ದೂರದ ದೃಷ್ಟಿಯ ಸಮಸ್ಯೆಗಳನ್ನು ಗುರುತಿಸುವುದರ ಮೇಲೆ ಕೇಂದ್ರೀಕರಿಸುತ್ತವೆ. ಹೀಗಾಗಿ ವಿವರವಾದ ಆರ್ಥೋಪ್ಟಿಕ್ ಮೌಲ್ಯಮಾಪನ ಕಣ್ಣಿನ ಸಮಸ್ಯೆಗಳ ಬಗ್ಗೆ ನಿರ್ಣಾಯಕ ವಿಷಯಗಳನ್ನು ಹೊರತರುತ್ತದೆ. ಈ ಮೌಲ್ಯಮಾಪನವು ಕನ್ನಡಕಗಳು, ನಿಗದಿಪಡಿಸಲಾದ ಕಣ್ಣಿನ ವ್ಯಾಯಾಮಗಳು ಮತ್ತು ಕೆಲವೊಮ್ಮೆ ಅಪರೂಪದ ಪ್ರಕರಣಗಳಲ್ಲಿ ವಿಶೇಷ ಕೇಂದ್ರಗಳಲ್ಲಿ ಸೂಕ್ತವಾದ ಚಿಕಿತ್ಸೆಯನ್ನು ಸೂಚಿಸುತ್ತದೆ ಎಂದು ರೋಹಿತ್ ಶೆಟ್ಟಿ ಮಾಹಿತಿ ನೀಡಿದರು.