ಡಾ ಸಿ ಎನ್ ಮಂಜುನಾಥ್ (ETV Bharat) ರಾಮನಗರ:ನಾವು ಕೇವಲ ದೇಹದ ಆರೋಗ್ಯ ಕಾಪಾಡಿಕೊಂಡರೆ ಸಾಲದು. ಸಮಾಜದ ಆರೋಗ್ಯವನ್ನು ಸಹ ಕಾಪಾಡಿಕೊಳ್ಳಬೇಕು. ಇದು ಪ್ರತಿಯೊಬ್ಬ ಪ್ರಜೆ, ಜನಪ್ರತಿನಿಧಿಗಳ ಜವಾಬ್ದಾರಿ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್ ಮಂಜುನಾಥ್ ಅವರು ತಿಳಿಸಿದ್ದಾರೆ.
ನಂತರ ಪ್ರಜ್ವಲ್ ರೇವಣ್ಣ ಪ್ರಕರಣದ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾವೆಲ್ಲರೂ ಮುಂದಿನ ಪೀಳಿಗೆಗೆ ಆದರ್ಶವಾಗಿರಬೇಕು ಎಂಬುದು ನನ್ನ ಭಾವನೆ ಎಂದರು.
ನಗರದ ಎಂ. ಜಿ ರಸ್ತೆಗೆ ಭೇಟಿ ನೀಡಿದ ಅವರು, ಆರ್ಯ ವೈಶ್ಯ ಸಭಾ ವತಿಯಿಂದ ಕನ್ನಿಕಾ ಪರಮೇಶ್ವರಿ ದೇಗುಲದಲ್ಲಿ ಪ್ರತಿಷ್ಠಾಪಿಸಿರುವ ದೇವರ 13 ಅಡಿ ಎತ್ತರದ ಮೂರ್ತಿ ಹಾಗೂ ಅಯೋಧ್ಯೆ ಬಾಲರಾಮನ ತದ್ರೂಪಿ ಪ್ರತಿಮೆಯ ದರ್ಶನ ಪಡೆದರು.
ಈ ಬಗ್ಗೆ ಮಾತನಾಡಿದ ಅವರು, ಕನ್ನಿಕಾ ಪರಮೇಶ್ವರಿ ನಮ್ಮೆಲ್ಲರಿಗೂ ಆರೋಗ್ಯ, ಆಯಸ್ಸು, ನೆಮ್ಮದಿ, ಸಂತೃಪ್ತಿ ಕೊಡಲಿ. ಮಳೆ ಇನ್ನೂ ಚೆನ್ನಾಗಿ ಬರಲಿ. ಎಲ್ಲಾ ಕೆರೆಗಳು ತುಂಬಿ ರೈತರ ಬಾಳು ಹಸನಾಗಲಿ. ನೀರು ಬಹಳ ಮುಖ್ಯ. ನೀರನ್ನು ಬಿಳಿ ಚಿನ್ನ ಎಂದು ಹೇಳುತ್ತೇವೆ. ಬಿದ್ದಂತಹ ನೀರನ್ನು ನಾವು ಸಂಗ್ರಹಿಸಿ ಅದನ್ನು ಜನರಿಗೆ ಅನುಕೂಲ ಮಾಡಬೇಕು. ಆರ್ಯ ವೈಶ್ಯ ಸಮಾಜ ಯಾವಾಗಲೂ ಸಮಾಜಮುಖಿ ಕೆಲಸವನ್ನು ಮಾಡುತ್ತಾ ಬಂದಿದೆ ಎಂದರು.
ನಮ್ಮ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ರೋಗಿಗಳ ಸಂಬಂಧಿಕರಿಗೆ ಮಧ್ಯಾಹ್ನ ಉಚಿತ ಊಟವನ್ನು ಕೊಡುತ್ತಿದ್ದಾರೆ. ಎಲ್ಲಾ ದಾನಕ್ಕಿಂತ ಅನ್ನದಾನ ಬಹಳ ಮುಖ್ಯ. ಈ ರೀತಿ ಕಾರ್ಯಕ್ರಮವಾದರೆ ಬೇರೆಯವರಿಗೂ ಪ್ರೇರಣೆ ಆಗುತ್ತೆ. ಯಾವುದೇ ಅಪೇಕ್ಷೆ ಇಲ್ಲದೆ ಮಾಡುವಂತಹ ಸೇವೆ ನಿಜವಾದ ಸಮಾಜ ಸೇವೆ. ಈ ಕಾರ್ಯವನ್ನು ಈ ಸಮಾಜದವರು ಮಾಡುತ್ತಿದ್ದಾರೆ. ಹೀಗಾಗಿ ಇವರ ಕಾರ್ಯವನ್ನು ನಾನು ಮೆಚ್ಚಿಕೊಂಡಿದ್ದೇನೆ ಎಂದು ತಿಳಿಸಿದರು.
2024ರ ಲೋಕಸಭಾ ಚುನಾವಣಾ ಕದನದ ಬಗ್ಗೆ ಪ್ರತಿಕ್ರಿಯಿಸಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು. ಕ್ಷೇತ್ರದ 8 ವಿಧಾನಸಭಾ ಕ್ಷೇತ್ರದಲ್ಲಿ ನಮಗೆ ಉತ್ತಮ ಫೀಡ್ ಬ್ಯಾಕ್ ಇದೆ. ಎಲ್ಲರೂ ಸಹ ನಿಮಗೆ ಬೆಂಬಲ ಕೊಟ್ಟಿದ್ದೇವೆಂದು ಹೇಳುತ್ತಿದ್ದಾರೆ. ಹಾಗಾಗಿ ನಮಗೆ ಗೆಲುವಿನ ವಿಶ್ವಾಸ ಖಂಡಿತಾ ಇದೆ. 3ನೇ ಬಾರಿಗೆ ಮೋದಿಯವರು ಪ್ರಧಾನಿಯಾಗಿ ಸರ್ಕಾರ ರಚನೆ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ :ಲೈಂಗಿಕ ದೌರ್ಜನ್ಯ ಪ್ರಕರಣ: ಪ್ರಜ್ವಲ್ ರೇವಣ್ಣ ವಿರುದ್ಧ ಅರೆಸ್ಟ್ ವಾರಂಟ್ ಹೊರಡಿಸಿದ ನ್ಯಾಯಾಲಯ - Prajwal Revanna Arrest Warrant