ಕರ್ನಾಟಕ

karnataka

ETV Bharat / state

ನೈಸ್ ರಸ್ತೆಯಲ್ಲಿ ಓವರ್ ಸ್ಪೀಡ್ ಆಗಿ ವಾಹನ ಚಲಾಯಿಸುತ್ತೀರಾ? ಸ್ಪೀಡ್ ರಾಡಾರ್, ಕ್ಯಾಮರಾ ಇರುತ್ತೆ ಹುಷಾರ್! - NICE Road

ಅತಿಯಾದ ವೇಗ ಮತ್ತು ಸಂಚಾರ ನಿಯಮ ಉಲ್ಲಂಘನೆಯಿಂದ ನೈಸ್ ರಸ್ತೆಯಲ್ಲಿ ಅಪಘಾತ ಪ್ರಕರಣಗಳು ಹೆಚ್ಚುತ್ತಿವೆ. ಇದಕ್ಕೆ ಕಡಿವಾಣ ಹಾಕಲು ರಾಜ್ಯ ರಸ್ತೆ ಹಾಗೂ ಸುರಕ್ಷತಾ ಇಲಾಖೆ ಮುಂದಾಗಿದೆ.

ನೈಸ್ ರಸ್ತೆ
ನೈಸ್ ರಸ್ತೆ (IANS)

By ETV Bharat Karnataka Team

Published : Jul 18, 2024, 8:06 AM IST

ಬೆಂಗಳೂರು:ರಸ್ತೆಅಪಘಾತ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನೈಸ್ ರಸ್ತೆಯಲ್ಲಿ ಆಟೋಮೆಟಿಕ್ ನಂಬರ್‌ಪ್ಲೇಟ್ ರೆಕಗ್ನೈಜೇಷನ್ ಕ್ಯಾಮರಾ (ಎಎನ್‌ಪಿಆರ್) ಹಾಗೂ ಸ್ಪೀಡ್ ರಾಡರ್ ಗನ್ಸ್ ಅಳವಡಿಸಲು ರಾಜ್ಯ ರಸ್ತೆ ಹಾಗೂ ಸುರಕ್ಷತೆ ಇಲಾಖೆ ತೀರ್ಮಾನಿಸಿದೆ.

ಈ ಕ್ಯಾಮರಾ ಅಳವಡಿಸುವುದರಿಂದ ನಿಗದಿತ ಮಿತಿಗಿಂತ ಹೆಚ್ಚು ವೇಗವಾಗಿ ವಾಹನ ಚಲಾಯಿಸಿದರೆ ಅಥವಾ ಇನ್ನಿತರ ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ ಸುಲಭವಾಗಿ ಪತ್ತೆ ಹಚ್ಚಬಹುದು. ನಿಯಮ ಉಲ್ಲಂಘಿಸಿದ ವಾಹನ ಸವಾರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬಹುದು. ಈ ಮೂಲಕ ನೈಸ್ ರಸ್ತೆಯಲ್ಲಿ ಅಪಘಾತ ಪ್ರಮಾಣವನ್ನು ಇಳಿಸಲು ಇಲಾಖೆ ಮುಂದಾಗಿದೆ. ಮುಂದಿನ ಕೆಲವೇ ದಿನಗಳಲ್ಲಿ ಎಎನ್‌ಪಿಆರ್ ಕ್ಯಾಮರಾಗಳನ್ನು ಇಲಾಖೆ ಅಳವಡಿಸಲಿದೆ.

ಕಳೆದ ಮೂರು ದಿನಗಳ ಹಿಂದೆ ನೈಸ್ ರಸ್ತೆಯಲ್ಲಿ ನಡೆದಿದ್ದ ಭೀಕರ ರಸ್ತೆ‌ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದರು.

ವೇಗದ ವಾಹನ ಚಾಲನೆ, ರಸ್ತೆಪಥ ಉಲ್ಲಂಘನೆ ಹಾಗೂ ಚಾಲನೆಯ ವೇಳೆ ಮೊಬೈಲ್ ಬಳಕೆಯಿಂದಾಗಿ ಹೆಚ್ಚು ಅಪಘಾತವಾಗುತ್ತಿದೆ. ಕಳೆದ ಆರು ತಿಂಗಳಲ್ಲಿ 65 ಅಪಘಾತ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 13 ಮಂದಿ ಸಾವನ್ನಪ್ಪಿದ್ದಾರೆ. 2023ರಲ್ಲಿ ನಡೆದಿದ್ದ 120 ಅಪಘಾತ ಪ್ರಕರಣಗಳಲ್ಲಿ 37 ಮಂದಿ ಸಾವನ್ನಪ್ಪಿದರೆ, 2022ರಲ್ಲಿ 111 ಪ್ರಕರಣಗಳಲ್ಲಿ 42 ಮಂದಿ ಮೃತಪಟ್ಟಿರುವುದಾಗಿ ಸಂಚಾರ ಇಲಾಖೆಯ ಅಂಕಿ-ಅಂಶಗಳು ತಿಳಿಸುತ್ತವೆ.

ಎಡಿಜಿಪಿ ಅಲೋಕ್ ಕುಮಾರ್ ಪ್ರತಿಕ್ರಿಯೆ: "ಈಗಾಗಲೇ ಬೆಂಗಳೂರು-ಮೈಸೂರು ಹಾಗೂ ಕೆಂಪೇಗೌಡ ವಿಮಾನ ನಿಲ್ದಾಣದ ಹೆದ್ದಾರಿಗಳಲ್ಲಿ ಇಂಥ ಕ್ಯಾಮರಾಗಳನ್ನು ಅಳವಡಿಸಿದ್ದು, ಅಪಘಾತ ಇಳಿಕೆಯಾಗಿದೆ. ನಿಗದಿಂತ ಹೆಚ್ಚು ವೇಗವಾಗಿ ವಾಹನ ಚಾಲನೆ, ಚಾಲನೆಯ ವೇಳೆ ಮೊಬೈಲ್ ಬಳಕೆ ಹಾಗೂ ಸೀಟ್ ಬೆಲ್ಟ್ ಧರಿಸದೇ ಇರುವುದು ಸೇರಿದಂತೆ ಇತರೆ ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ ಸ್ವಯಂಪ್ರೇರಿತವಾಗಿ ಕ್ಯಾಮರಾಗಳ ಮೂಲಕ ಸೆರೆಹಿಡಿದು ಪ್ರಕರಣ ದಾಖಲಿಸಲಾಗುವುದು" ಎಂದು ಇಲಾಖೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ತಿಳಿಸಿದ್ದಾರೆ.

ನೈಸ್ ರಸ್ತೆಯಲ್ಲಿ ವೇಗದ ಮಿತಿ ಗಂಟೆಗೆ 100 ಕಿ.ಮೀ ನಿಗದಿಪಡಿಸಿದ್ದರೂ, ವೇಗವಾಗಿ ವಾಹನ ಚಲಾಯಿಸಿ ನಿಯಮ ಉಲ್ಲಂಘಿಸುತ್ತಿರುವುದು ಕಂಡುಬರುತ್ತಿದೆ. ಹೀಗಾಗಿ ಮುಂದಿನ ವಾರದಿಂದ ಮಾರ್ಗದ ನಿರ್ದಿಷ್ಟ ಸ್ಥಳಗಳಲ್ಲಿ ಸ್ಪೀಡ್ ರಾಡರ್​​ಗಳನ್ನು ಹಾಕಲಾಗುವುದು. ಜೊತೆಗೆ, ಎಎನ್‌ಪಿಆರ್ ಕ್ಯಾಮರಾ ನೆರವಿನಿಂದ 100 ಮೀಟರ್ ದೂರದಲ್ಲಿ ಗರಿಷ್ಠ ಪ್ರಮಾಣಕ್ಕಿಂತ ವಾಹನ ಚಲಾಯಿಸುತ್ತಿರುವುದು ಕಂಡುಬಂದರೆ ಫೋಟೊ ಸೆರೆಹಿಡಿದು ಇಂಟಲಿಜೆಂಟ್ ಟ್ಯಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಂಗೆ (ಐಟಿಎಂಸ್) ರವಾನಿಸಲಿದೆ. ಈ ಮೂಲಕ ಪ್ರಕರಣ ದಾಖಲಿಸಲಾಗುವುದು ಎಂದು ಸಂಚಾರಿ ಇಲಾಖೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನೈಸ್ ರಸ್ತೆಯಲ್ಲಿ ಅಪಫಾತ ಪ್ರಕರಣಗಳ ವಿವರ (ಜೂನ್ 30 ಅಂತ್ಯಕ್ಕೆ):

ವರ್ಷ ಮೃತರು ಗಾಯಾಳು ಒಟ್ಟು ಪ್ರಕರಣ
2022 42 69 111
2023 37 83 120
2024 13 52 65

ಇದನ್ನೂ ಓದಿ: ಬೆಂಗಳೂರು: ನೈಸ್ ರಸ್ತೆಯಲ್ಲಿ ಭೀಕರ ಅಪಘಾತ, ಗ್ರಾಪಂ ಸದಸ್ಯ ಸೇರಿ ಮೂವರ ದುರ್ಮರಣ

ABOUT THE AUTHOR

...view details