ಬೆಳಗಾವಿ:ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ ರಾಜ್ಯರ ಎರಡು ಕಣ್ಣುಗಳು. ಇಬ್ಬರೂ ಕೂಡ ಬಹಳ ಒಗ್ಗಟ್ಟಾಗಿದ್ದು, ಬಿಜೆಪಿಯವರು ಇಬ್ಬರು ನಾಯಕರ ನಡುವೆ ಹುಳಿ ಇಂಡುವ ಕೆಲಸ ಮಾಡುತ್ತಿದ್ದಾರೆ. ಅದರಲ್ಲಿ ಎನೂ ಅರ್ಥ ಇಲ್ಲ'' ಎಂದು ಶಾಸಕ ಎನ್.ಹೆಚ್. ಕೋನರೆಡ್ಡಿ ಕಿಡಿಕಾರಿದರು.
ಬೆಳಗಾವಿ ಜಿಲ್ಲೆಯ ಮುನವಳ್ಳಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ''ಬಿಜೆಪಿ ನಾಯಕರಲ್ಲೇ ಎಲ್ಲವೂ ಸರಿ ಇಲ್ಲ. ಶಾಸಕ ಯತ್ನಾಳ್, ಪ್ರತಿಪಕ್ಷ ನಾಯಕ ಅಶೋಕ್ ನಡುವೆ ಸರಿ ಇಲ್ಲ. ಮೊದಲು ಅವರ ಮನೆ ರಿಪೇರಿ ಮಾಡಿಕೊಂಡು ನಮ್ಮ ಬಗ್ಗೆ ಹೇಳಲಿ. 135 ಶಾಸಕರು ಇರುವ ಒಳ್ಳೆಯ ಸರ್ಕಾರ ನಮ್ಮದು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ನೇತೃತ್ವದಲ್ಲಿ ನಾವೆಲ್ಲಾ ಕೆಲಸ ಮಾಡುತ್ತಿದ್ದೇವೆ. ಮುಖ್ಯಮಂತ್ರಿ ಬದಲಾವಣೆ ವಿಚಾರ ಯಾವುದೂ ಚರ್ಚೆ ಇಲ್ಲ. ನಮ್ಮ ಮನೆ ಶುದ್ಧವಿದೆ. ಅದನ್ನು ಒಡೆಯುವ ಕೆಲಸ ನೀವು ಮಾಡಬೇಡಿ. ಮೊದಲು ನಿಮ್ಮ ಬಿಜೆಪಿ ಮನೆ ಶುದ್ಧ ಮಾಡಿಕೊಂಡು ನಮ್ಮ ಬಗ್ಗೆ ಮಾತಾಡಿ'' ಎನ್ನುವ ಮೂಲಕ ಬಿಜೆಪಿ ನಾಯಕರ ವಿರುದ್ಧ ಶಾಸಕ ಎನ್. ಹೆಚ್. ಕೋನರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
''ಸಿಎಂ ಬದಲಾವಣೆ ಆಗುತ್ತೆ, ಸರ್ಕಾರ ಉರುಳುತ್ತೆ ಎಂಬ ಚರ್ಚೆಗೆ ನಮ್ಮ ಸರ್ಕಾರ ಐದು ವರ್ಷ ಗಟ್ಟಿಮುಟ್ಟಾಗಿ ಇರುತ್ತದೆ. ಮುಂದೆಯೂ ನಮ್ಮದೇ ಸರ್ಕಾರ ಬರುತ್ತದೆ. ಇತಿಹಾಸದಲ್ಲಿ ಕೋನರೆಡ್ಡಿ ಹೇಳಿದ್ದು ಸತ್ಯವಾಗಿರುತ್ತದೆ ಅಂತಾ ಹೇಳುತ್ತಾರೆ. ನಮ್ಮದೇ ಸರ್ಕಾರ ಬರುತ್ತದೆ ಬೇಕಾದರೆ ಬರೆದು ಇಟ್ಟುಕೊಳ್ಳಿ'' ಎಂದು ಶಾಸಕ ಕೋನರೆಡ್ಡಿ ಭವಿಷ್ಯ ನುಡಿದರು.