ಗಂಗಾವತಿ (ಕೊಪ್ಪಳ):ಹೃದಯಬಡಿತ ನಿಂತಿದ್ದ ವ್ಯಕ್ತಿಗೆ ವೈದ್ಯರು ಸಿಪಿಆರ್ (ಕಾರ್ಡಿಯೋ ಪಲ್ಮನರಿ ರಿಸಸಿಟೇಶನ್) ಮೂಲಕ ಮರುಜನ್ಮ ನೀಡಿರುವ ಘಟನೆ ನಗರದ ವರಸಿದ್ಧಿ ಆಸ್ಪತ್ರೆಯಲ್ಲಿ ನಡೆದಿದೆ. ಯಾಕೋಬ ತಿಮ್ಮಣ್ಣ (27) ಬದುಕುಳಿದ ವ್ಯಕ್ತಿ.
ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಯಾಕೋಬ, ಚಿಕಿತ್ಸೆಗಾಗಿ ವರಸಿದ್ಧಿ ಆಸ್ಪತ್ರೆಗೆ ಬಂದಿದ್ದರು. ಇನ್ನೇನು ಆಸ್ಪತ್ರೆಗೆ ಪ್ರವೇಶಿಸಬೇಕು ಎನ್ನುವಷ್ಟರಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ವೈದ್ಯರಾದ ಅರ್ಜುನ್ ಹೊಸಳ್ಳಿ, ಶ್ವೇತಾ ಹೊಸಳ್ಳಿ ಮತ್ತು ಸಿಬ್ಬಂದಿ ಸಿಪಿಆರ್ ಮತ್ತು ಡಿಸಿ ಕರೆಂಟ್ ಶಾಕ್ ನೀಡಿ ವ್ಯಕ್ತಿಯ ಹೃದಯ ಬಡಿದುಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ನಂತರ ವ್ಯಕ್ತಿಗೆ ಇಸಿಜಿ ಮಾಡಿಸಿ ಹೃದಯಬಡಿತ ಸುಧಾರಣೆಯಾಗುವವರೆಗೂ ಎರಡು ದಿನಗಳ ಕಾಲ ಐಸಿಯುನ ವೆಂಟಿಲೇಟರ್ನಲ್ಲಿರಿಸಿದ್ದಾರೆ. ಎರಡು ದಿನಗಳ ಬಳಿಕ ವ್ಯಕ್ತಿಯ ಹೃದಯ ಬಡಿತದಲ್ಲಿ ಚೇತರಿಕೆ ಕಂಡುಬಂದ ಹಿನ್ನೆಲೆ ಐಸಿಯುನಿಂದ ಸಾಮಾನ್ಯ ಬೆಡ್ಗೆ ಶಿಫ್ಟ್ ಮಾಡಲಾಗಿದೆ. ಅನಂತರ ಐದು ದಿನಗಳ ಕಾಲ ಚಿಕಿತ್ಸೆ ನೀಡಿ, ಹೃದಯ ಸ್ವಾಸ್ಥ್ಯ ತಿಳಿಸುವ ಆಂಜಿಯೋಗ್ರಾಮ್ ಪರೀಕ್ಷೆ ನಡೆಸಿ, ಯಾವುದೇ ಸಮಸ್ಯೆ ಕಂಡುಬರದ ಹಿನ್ನೆಲೆ ವ್ಯಕ್ತಿಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ತನಗೆ ಪುನರ್ಜನ್ಮ ಕೊಟ್ಟ ವೈದ್ಯರಿಗೆ ಯಾಕೋಬ ಧನ್ಯವಾದ ತಿಳಿಸಿ ಮನೆಗೆ ಮರಳಿದ್ದಾರೆ.
ಅದೃಷ್ಟದ ಜೊತೆಗೆ ಸಕಾಲಕ್ಕೆ ಚಿಕಿತ್ಸೆ ನೀಡಿದ್ದರಿಂದ ವ್ಯಕ್ತಿ ಸಾವಿನ ದವಡೆಯಿಂದ ಪಾರಾಗಿದ್ದಾರೆ ಎಂದು ವೈದ್ಯ ಅರ್ಜುನ್ ಹೊಸಳ್ಳಿ ತಿಳಿಸಿದರು.
ಇದನ್ನೂ ಓದಿ:ಲೇಡಿಗೋಶನ್ ಆಸ್ಪತ್ರೆಯಲ್ಲಿ ಮಗು ಮಾರಾಟವಾಗಿಲ್ಲ, ಆರೋಪ ನಿರಾಧಾರ: ವೈದ್ಯಕೀಯ ಅಧೀಕ್ಷಕ ಸ್ಪಷ್ಟನೆ