ಹಾವೇರಿ:"ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಮೇಕೆದಾಟು ಯೋಜನೆಗೆ ಮೊದಲು ತಮಿಳುನಾಡು ಸರ್ಕಾರದ ಒಪ್ಪಿಗೆ ಪಡೆಯಲಿ. ತಮಿಳುನಾಡಿನವರ ಜೊತೆ ಸೇರಿ ಸರ್ಕಾರ ಮಾಡಿದ್ದಾರಲ್ವಾ? ಮೊದಲು ಅವರ ಒಪ್ಪಿಗೆ ತೆಗೆದುಕೊಳ್ಳಲಿ. ನಂತರ ನಾನೇ ಪ್ರಧಾನಿ ಮೋದಿ ಒಪ್ಪಿಗೆ ಕೊಡಿಸುವೆ" ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಜಿಲ್ಲೆಯ ರಾಣೆಬೆನ್ನೂರಲ್ಲಿ ಮಾತನಾಡಿದ ಅವರು "ಮೈಕ್ರೋ ಫೈನಾನ್ಸ್ ವಿಚಾರದಲ್ಲಿ ಸರ್ಕಾರ ಸರಿಯಾದ ರೀತಿಯಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಬೇಕಿತ್ತು. ಅನ್ ಅಫೀಷಿಯಲ್ ಆಗಿ ಸಾಲ ಕೊಡ್ತಿದ್ದಾರೆ. ಅದೆಲ್ಲಾ ಕಾನೂನು ಬಾಹಿರ. ರಿಸರ್ವ್ ಬ್ಯಾಂಕ್ನಿಂದ ಅನುಮತಿ ಪಡೆದು ಮಾಡೋರು ಒಂದು ಕಡೆ ಆದರೆ ಹೆಚ್ಚಿನ ಭಾಗ ಖಾಸಗಿ ಮೈಕ್ರೋ ಫೈನಾನ್ಸ್ನವರೇ ಇದ್ದಾರೆ. ಬಹುತೇಕ ಫೈನಾನ್ಸ್ನವರು ರಿಸರ್ವ್ ಬ್ಯಾಂಕ್ನಿಂದ ಯಾವುದೇ ಪರ್ಮಿಷನ್ ತಗೊಂಡಿರಲ್ಲ. ಕಾನೂನು ಸಚಿವರು, ಅಥವಾ ಮುಖ್ಯಮಂತ್ರಿಗಳು ರಾಜ್ಯಪಾಲರನ್ನು ಭೇಟಿ ಮಾಡಿ ವಿವರಿಸಬೇಕು. ಯಾಕೆ ಈ ಕಾನೂನು ತರ್ತಾ ಇದ್ದೇವೆ ಎಂದು ರಾಜ್ಯಪಾಲರಿಗೆ ವಿವರಿಸಬೇಕು" ಎಂದು ಕುಮಾರಸ್ವಾಮಿ ತಿಳಿಸಿದರು.
"ಸರ್ಕಾರಕ್ಕೆ ಪವರ್ ಇದೆ, ಕಾನೂನು ವ್ಯಾಪ್ತಿಯಲ್ಲಿ ಕ್ರಮ ತಗೊಬೇಕು. ನಾನು ಹಿಂದೆ ಮಾಡೋಕೆ ಹೊರಟಿರಲಿಲ್ಲವಾ? ನಾನು ಹಿಂದೆ ಯಾರು ಖಾಸಗಿಯವರ ಬಳಿ ಸಾಲ ತೆಗೆದುಕೊಳ್ಳುತ್ತಾರೋ ಆ ಸಾಲವನ್ನು ಮನ್ನಾ ಮಾಡಬೇಕು ಎಂದು ರಾಷ್ಟ್ರಪತಿಗಳ ಅನುಮತಿ ಪಡೆದು ಬಂದಿದ್ದೆ. ಖಾಸಗಿಯವರ ಬಳಿ ಪಡೆದ ಸಾಲ ವಜಾ ಮಾಡಲು ತೀರ್ಮಾನ ಮಾಡಿದ್ದೆವು. ಆದರೆ ನಾನು ಮುಖ್ಯಮಂತ್ರಿ ಸ್ಥಾನದಿಂದ ಇಳಿದ ತಕ್ಷಣ ಅದನ್ನು ಕಸದ ಬುಟ್ಟಿಗೆ ಹಾಕಿಕೊಂಡರು" ಎಂದು ಕುಮಾರಸ್ವಾಮಿ ಆರೋಪಿಸಿದರು.
ವಿಜಯೇಂದ್ರ ರಾಜ್ಯಾದ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಭಿನ್ನರ ಗುಂಪಿನಿಂದ ಒತ್ತಾಯ ಕುರಿತಂತೆ ಮಾತನಾಡಿದ ಅವರು, "ಬಿಜೆಪಿ ಭಿನ್ನಾಭಿಪ್ರಾಯಗಳಿಗೂ ನಮಗೂ ಸಂಬಂಧ ಇಲ್ಲ. ಅಲ್ಲಿರುವ ಭಿನ್ನಾಭಿಪ್ರಾಯ ಸರಿಪಡಿಸುವ ಶಕ್ತಿ ಅವರ ಬಳಿ ಇದೆ, ಸರಿಪಡಿಸಿಕೊಳ್ತಾರೆ. ಅವರ ಪಕ್ಷದಲ್ಲಿ ನಡೆಯುತ್ತಿರುವ ತೀರ್ಮಾನದ ಬಗ್ಗೆ ನಾನು ಚರ್ಚೆ ಮಾಡಲು ಆಗಲ್ಲ" ಎಂದು ಹೇಳಿದರು.