ಬೆಂಗಳೂರು: ನಾವು ಕಾಂಗ್ರೆಸ್ ಪಕ್ಷ ಜಗದೀಶ್ ಶೆಟ್ಟರ್ ಅವರು ಒಬ್ಬ ಹಿರಿಯ ನಾಯಕರೆಂದು ಗೌರವ, ವಿಶ್ವಾಸ ತೋರಿಸಿದ್ದೆವು. ವಿಧಾನಸಭಾ ಚುನಾವಣೆಯಲ್ಲಿ ಸೋತರೂ ಅವರಿಗೆ ವಿಧಾನ ಪರಿಷತ್ನಲ್ಲಿ ಸ್ಥಾನ ನೀಡಿದ್ದೆವು. ಆದರೆ ಈಗ ನಾವು ಅವರ ಮೇಲೆ ಇಟ್ಟ ವಿಶ್ವಾಸಕ್ಕೆ ಧಕ್ಕೆ ತಂದಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮರಳಿ ಬಿಜೆಪಿಗೆ ಸೇರಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು,"ಜಗದೀಶ್ ಶೆಟ್ಟರ್ ನನ್ನ ಬಳಿ, ಮತ್ತೆ ಬಿಜೆಪಿಗೆ ಬರುವಂತೆ ಮನವಿ ಮಾಡುತ್ತಿದ್ದಾರೆ. ಲೋಕಸಭೆ ಹಾಗೂ ವಿಧಾನಸಭೆಯಿಂದ ನನ್ನ ಬಳಿ ಮಾತನಾಡಲು ಜನರನ್ನು ಕಳುಹಿಸುತ್ತಿದ್ದಾರೆ ಎಂದು ಹೇಳಿಕೊಂಡಿದ್ದರು. ಆ ಬಗ್ಗೆ ನಿನ್ನೆ ಬೆಳಗ್ಗೆ ಕೂಡ ನಾನು ಜಗದೀಶ್ ಶೆಟ್ಟರ್ ಅವರ ಬಳಿ ಮಾತನಾಡಿದ್ದೆ. ಆಗ ಅವರು ನಾನು ಅಂತಹ ಕೆಲಸ ಮಾಡುವುದಿಲ್ಲ. ನಾನು ಮರಳಿ ಬಿಜೆಪಿಗೆ ಹೋಗುವುದಿಲ್ಲ. ರಾಜಕಾರಣಕ್ಕೆ ಹಾಗೂ ನನಗೆ ಕಾಂಗ್ರೆಸ್ ಪಕ್ಷ ಮರುಜೀವ ಕೊಟ್ಟಿದೆ. ನಾನು ಅಂತಹ ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದರು. ಅದನ್ನೇ ನಾನು ಗಮನದಲ್ಲಿಟ್ಟುಕೊಂಡು, ಮೈಸೂರಿನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದೆ. ಆದರೆ ಈಗ ಜಗದೀಶ್ ಶೆಟ್ಟರ್ ಮತ್ತೆ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ" ಎಂದು ಹೇಳಿದರು.
ಜಗದೀಶ್ ಶೆಟ್ಟರ್ ಅವರೇ ಹೇಳಿದ್ದಾರೆ ಆ ಪಕ್ಷ ಒಳ್ಳೇದಲ್ಲ. ಹಾಗೂ ರಾಮ ಮಂದಿರ ಹಾಗೂ ಬೇರೆ ಬೇರೆ ವಿಚಾರಗಳನ್ನು ಬಿಜೆಪಿ ಯಾವ ರೀತಿ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಬುದರ ಹಲವಾರು ಹೇಳಿಕೆಗಳನ್ನು ಕೊಟ್ಟಿದ್ದಾರೆ. ಆದರೆ ಈಗ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿರುವ ಪತ್ರವನ್ನು ಇ-ಮೇಲ್ ಮೂಲಕ ಕಳುಹಿಸುವುದಾಗಿ ಸ್ಪೀಕರ್ಗೆ ಹೇಳಿದ್ದಾರೆ ಎನ್ನುವ ಮಾಹಿತಿ ನಮ್ಮ ಕಚೇರಿಯಿಂದ ಸಿಕ್ಕಿದೆ. ಅವರು ಯಾವುದಾದರು ಒತ್ತಡದಿಂದ ಈ ನಿರ್ಧಾರ ತೆಗೆದುಕೊಂಡರೋ? ಅವರನ್ನು ಬಲವಂತವಾಗಿ ಕರೆದುಕೊಂಡು ಹೋದರೋ? ಈ ಬಗ್ಗೆ ಅವರು ಮೊದಲು ಹೇಳಿಕೆ ಕೊಡಲಿ. ಅದಾದ ಮೇಲೆ ನಾವು ಮಾತನಾಡುತ್ತೇವೆ" ಎಂದರು.
ದೇಶದ ಹಿತಕ್ಕಾಗಿ ಮತ್ತೆ ಬಿಜೆಪಿಗೆ ಬಂದಿದ್ದೇನೆ ಎನ್ನುವ ಶೆಟ್ಟರ್ ಹೇಳಿಕೆ ಬಗ್ಗೆ ಮಾತನಾಡಿ, "ಅವರಿಗೆ ವಿಧಾನಸಭಾ ಚುನಾವಣೆಯಲ್ಲಿ ಸೀಟ್ ತಪ್ಪಿಸುವಾಗ ದೇಶದ ಹಿತ ಗೊತ್ತಿರಲಿಲ್ವಾ? ಕಾಂಗ್ರೆಸ್ ಐದು ವರ್ಷಗಳ ಅವಧಿಯ ಎಂಎಲ್ಸಿ ಸ್ಥಾನವನ್ನು ಗೌರವದಿಂದ ನೀಡುವಾಗ ದೇಶದ ಹಿತ ಗೊತ್ತಿರಲಿಲ್ವಾ? ಅವರು ಮಾತನಾಡಲಿ ಮೊದಲು, ನಂತರ ನಾನು ಪ್ರತಿಕ್ರಿಯಿಸುತ್ತೇನೆ. ಕಾಂಗ್ರೆಸ್ ಅಧ್ಯಕ್ಷನಾಗಿ ಈವರೆಗೆ ನನಗೆ ರಾಜೀನಾಮೆ ಪತ್ರ ತಲುಪಿಲ್ಲ." ಎಂದು ಹೇಳಿದರು.