ಬೆಂಗಳೂರು:ಧಾರವಾಡ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಶಿರಹಟ್ಟಿ ಭಾವೈಕ್ಯತಾ ಮಹಾ ಸಂಸ್ಥಾನ ಪೀಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿಗೆ ಬೆಂಬಲ ನೀಡುವ ಬಗ್ಗೆ ಸ್ಥಳೀಯ ನಾಯಕರ ಜತೆ ಚರ್ಚೆ ನಡೆಸುತ್ತೇನೆ. ನಾನು ಏಕಾಂಗಿಯಾಗಿ ಈ ಬಗ್ಗೆ ತೀರ್ಮಾನ ಮಾಡಲು ಆಗುವುದಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಟಿ ಉದ್ದೇಶಿಸಿ ಅವರು ಮಾತನಾಡಿದರು. ಈ ವೇಳೆ ದಿಂಗಾಲೇಶ್ವರ ಸ್ವಾಮಿಜಿಗಳನ್ನು ನೀವು ಸಂಪರ್ಕ ಮಾಡಿದ್ದೀರಾ ಎಂದು ಪ್ರಶ್ನೆಗೆ, ಅವರು ಈಗ ಚುನಾವಣೆ ಸ್ಪರ್ಧಿಸುವ ತೀರ್ಮಾನ ಮಾಡಿದ್ದು, ಈ ಬಗ್ಗೆ ಅನೇಕರು ನನಗೆ ಸಲಹೆ ನೀಡಿದ್ದಾರೆ. ಕೇಂದ್ರ ಚುನಾವಣಾ ಸಮಿತಿ ನಿರ್ಧಾರದಂತೆ ನಾವು ಈಗಾಗಲೇ ಆನಂದ್ ಅಸೂಟಿ ಅವರಿಗೆ ಬಿ ಫಾರಂ ನೀಡಿದ್ದೇವೆ. ನಮ್ಮ ಅಭ್ಯರ್ಥಿ ಯುವಕರಾಗಿದ್ದಾರೆ. ಈ ಕುರಿತ ಪ್ರಸ್ತಾವನೆ ಇದೆ. ಈ ಬಗ್ಗೆ ಸದ್ಯದಲ್ಲೇ ಸ್ಥಳೀಯ ನಾಯಕರ ಜತೆ ಚರ್ಚೆ ಮಾಡುತ್ತಿದ್ದೇನೆ. ನಮ್ಮ ಎಐಸಿಸಿ ಅಧ್ಯಕ್ಷರು, ಚುನಾವಣಾ ಸಮಿತಿ, ಮುಖ್ಯಮಂತ್ರಿಗಳು, ರಾಜ್ಯ ಉಸ್ತುವಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರನ್ನು ವಿಶ್ವಾಸಕ್ಕೆ ಪಡೆಯಬೇಕು. ಸ್ವಾಮೀಜಿಗಳು ಮೊದಲಿನಿಂದಲೂ ಹೋರಾಟ ಮಾಡಿಕೊಂಡು ಬಂದವರು. ಮೊದಲೇ ಈ ವಿಚಾರ ನಮಗೆ ಗೊತ್ತಿದ್ದರೆ ಸುಲಭವಾಗುತ್ತಿತ್ತು ಎಂದು ತಿಳಿಸಿದರು.
ಬರ ಪರಿಹಾರ ಬಗ್ಗೆ ಚುನಾವಣಾ ಆಯೋಗಕ್ಕೆ ಮನವಿ:ಇದೇ ಬರ ಪರಿಹಾರ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಚುನಾವಣಾ ಆಯೋಗದಿಂದ ಕರ್ನಾಟಕಕ್ಕೆ ಬರ ಪರಿಹಾರ ವಿಳಂಬವಾಗಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಒಪ್ಪಿಕೊಂಡಿದ್ದಾರೆ. ಆದರೆ ನಮ್ಮ ರಾಜ್ಯ ಸರ್ಕಾರ ನಾಲ್ಕೈದು ತಿಂಗಳ ಹಿಂದೆಯೇ ಬರ ಪರಿಹಾರ ನೀಡುವಂತೆ ಮನವಿ ಮಾಡಿತ್ತು. ಪ್ರಧಾನಮಂತ್ರಿ, ಗೃಹ ಸಚಿವರನ್ನು ಮುಖ್ಯಮಂತ್ರಿಗಳು ಭೇಟಿ ಮಾಡಿ ಮನವಿ ಮಾಡಿದ್ದರು. ಕೇಂದ್ರದಿಂದ ಬರ ಅಧ್ಯಯನ ತಂಡ ಕೂಡ ಬಂದಿತ್ತು. ಅದನ್ನು ಅವರು ಮರೆತಿದ್ದಾರೆ ಎಂದು ಡಿಕೆಶಿ ಆರೋಪಿಸಿದರು.
ಬರ ಪರಿಹಾರ ವಿಚಾರವಾಗಿ ಕರ್ನಾಟಕ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಖಂಡಿಸಿ ನಾವು ನ್ಯಾಯಾಲಯದ ಮೊರೆ ಹೋಗಿದ್ದೇವೆ. ಬರ ಪರಿಹಾರ ವಿತರಣೆ ವಿಚಾರದಲ್ಲಿ ಮಧ್ಯಪ್ರವೇಶ ಮಾಡಬಾರದು ಎಂದು ನಮ್ಮ ಪಕ್ಷದ ವತಿಯಿಂದ ಕೂಡ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದು, ನಮ್ಮ ರಾಜ್ಯಕ್ಕೆ ಬರಬೇಕಾದ ಅನುದಾನ, ಪರಿಹಾರ ಬಾಕಿಯಿದೆ ಎಂದು ತಿಳಿಸಿದ್ದೇವೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದರೂ ರಾಜ್ಯದ ಎಲ್ಲಾ ಹಳ್ಳಿಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಗೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಬೆಂಗಳೂರಿನಲ್ಲಿ ಸಮರ್ಪಕವಾಗಿ ನೀರಿನ ಸಮಸ್ಯೆ ನಿಭಾಯಿಸಲಾಗುತ್ತಿದೆ ಎಂದರು.