ಬೆಂಗಳೂರು:ಕುಮಾರಸ್ವಾಮಿ ಈಗಲಾದರೂ ಮುಂದೆ ಬಂದು ಜನರಿಗೆ ಊಟ ಹಾಕುತ್ತಿದ್ದಾರೆ. ಕೋವಿಡ್ ಸಮಯದಲ್ಲಿ ಅವರು ಏನೂ ಮಾಡಲಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಟೀಕಿಸಿದರು.
ಸದಾಶಿವನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿಯವರ ತೋಟದಮನೆಯಲ್ಲಿ ಭೋಜನ ಕೂಟದ ವಿಚಾರವಾಗಿ ಪ್ರತಿಕ್ರಿಯಿಸಿ, ಚುನಾವಣಾ ನೀತಿ ಸಂಹಿತೆ ಬಗ್ಗೆ ಚುನಾವಣಾ ಆಯೋಗ ತಲೆಕೆಡಿಸಿಕೊಳ್ಳಬೇಕು. ಆಯೋಗ ನಿಜವಾಗಲೂ ಕಾರ್ಯಪ್ರವೃತ್ತವಾಗಿದ್ದರೆ ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ಮಠ ಇಬ್ಭಾಗ ಮಾಡಿದವರು:ಇನ್ನು, ಮೈತ್ರಿ ಪಕ್ಷಗಳ ನಾಯಕರು ಆದಿಚುಂಚನಗಿರಿ ಮಠದ ಶ್ರೀಗಳನ್ನು ಭೇಟಿಯಾಗಿರುವ ವಿಚಾರಕ್ಕೆ, ಸ್ವಾಮೀಜಿಗಳು ಬುದ್ಧಿವಂತರಿದ್ದಾರೆ. ರಾಜಕೀಯದಲ್ಲಿ ಅವರು ಹಸ್ತಕ್ಷೇಪ ಮಾಡುವುದಿಲ್ಲ. ಜನತಾದಳದವರು ಮಠವನ್ನು ಇಬ್ಭಾಗ ಮಾಡಿರುವ ಬಗ್ಗೆ ಸ್ವಾಮೀಜಿಗಳಿಗೆ ಅರಿವಿದೆ. ನಮ್ಮ ಜನ ಕೂಡ ಇದನ್ನು ಗಮನಿಸುತ್ತಾರೆ ಎಂದು ಹೇಳಿದರು.
8 ಮಂದಿ ಒಕ್ಕಲಿಗರಿಗೆ ಲೋಕಸಭಾ ಟಿಕೆಟ್ ನೀಡಿದ್ದೇವೆ. ನಾನು ಡಿಸಿಎಂ ಮತ್ತು ಪಕ್ಷದ ಅಧ್ಯಕ್ಷನಾಗಿದ್ದೇನೆ. ನಾವೆಲ್ಲಾ ಸಮಾಜದ ಮತ್ತು ರಾಜ್ಯದ ಅಭಿವೃದ್ಧಿಗೆ ಕೆಲಸ ಮಾಡಲು ತಯಾರಿದ್ದೇವೆ. ಭವಿಷ್ಯದ ಬಗೆಗಿನ ಮಾತುಗಳು ನಮಗೇಕೆ?. ನಮ್ಮ ಸಮಾಜದವರು ದಡ್ಡರಲ್ಲ ಎಂದು ತಿಳಿಸಿದರು.
ಒಕ್ಕಲಿಗ ನಾಯಕರನ್ನು ಒಗ್ಗೂಡಿಸುತ್ತೇವೆ ಎಂಬ ಹೆಚ್‌ಡಿಕೆ ಹೇಳಿಕೆಗೆ, ಎಲ್ಲರೂ ಅವರವರ ಬದುಕು ನೋಡಿಕೊಳ್ಳುತ್ತಾರೆ. ನಾವು ಈಗಾಗಲೇ ಅಧಿಕಾರದಲ್ಲಿದ್ದೇವೆ. ಅದಾದ ನಂತರ ಮುಂದಿನ ಐದು ವರ್ಷವೂ ನಾವೇ ಇರುತ್ತೇವೆ. ಮುಂದೆ ನಾವು ಗೆಲ್ಲುವುದಿಲ್ಲ ಎಂದು ಈ ರೀತಿ ಹೇಳುತ್ತಿದ್ದಾರೆ. ನಮ್ಮಿಂದಾಗಿ ಅವರು ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಸಿದ್ಧಾಂತವನ್ನೇ ಅವರು ಮಾರಿಕೊಂಡಿದ್ದಾರೆ. ಹಾಗಾಗಿ ಅವರ ವಿಚಾರ ಬಿಡಿ. ಆದರೆ ದೇವೇಗೌಡರಿಗೆ ಅಳಿಯನನ್ನು ಬಿಜೆಪಿಯಿಂದ ನಿಲ್ಲಿಸುವ ಪರಿಸ್ಥಿತಿ ಬರಬಾರದಿತ್ತು. ಅವರ ಸ್ಥಿತಿ ನೋಡಿ ಬೇಸರವಾಗುತ್ತದೆ ಎಂದು ವ್ಯಂಗ್ಯವಾಡಿದರು.