ಕರ್ನಾಟಕ

karnataka

ETV Bharat / state

ಸಿಲಿಕಾನ್ ಸಿಟಿಯಲ್ಲಿ ದೀಪಾವಳಿ ಸಂಭ್ರಮ ಜೋರು: ತರಕಾರಿ, ಹೂವು - ಹಣ್ಣು ದುಬಾರಿ, ಹೆಚ್ಚಾದ ಸಂಚಾರ ದಟ್ಟಣೆ - DIWALI 2024

ಸಿಲಿಕಾನ್ ಸಿಟಿಯಲ್ಲಿ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮಾಚರಣೆ ಜೋರಾಗಿದೆ. ನಗರ ನಿವಾಸಿಗರು, ಹಬ್ಬಕ್ಕೆ ಮತ್ತಷ್ಟು ಮೆರಗು ಕೊಡುವ ದೀಪ, ಹೊಸ ಬಟ್ಟೆ, ತರಕಾರಿ, ಹೂವು - ಹಣ್ಣುಗಳ ಖರೀದಿಯಲ್ಲಿ ತೊಡಗಿದ್ದಾರೆ.

DIWALI CELEBRATIONS IN BENGALURU
ಸಿಲಿಕಾನ್ ಸಿಟಿ (IANS)

By ETV Bharat Karnataka Team

Published : Oct 31, 2024, 6:57 AM IST

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೆಳಕಿನ ಹಬ್ಬ ದೀಪಾವಳಿ ಜೋರಾಗಿದೆ. ಹಬ್ಬದ ಹಿನ್ನೆಲೆಯಲ್ಲಿ ನಗರದ ವಿವಿಧ ಮಾರುಕಟ್ಟೆಯಲ್ಲಿ ಹೂವು, ಹಣ್ಣು ಸೇರಿದಂತೆ ಹಬ್ಬದ ಪರಿಕರಗಳ ವ್ಯಾಪಾರ ವಹಿವಾಟು ಜೋರಾಗಿದೆ. ಮತ್ತೊಂದೆಡೆ ಸಾಲು ಸಾಲು ರಜೆಗಳಿಂದ ಜನ ತಮ್ಮ ಊರುಗಳತ್ತ ತೆರಳುತ್ತಿದ್ದರಿಂದ ಸಂಚಾರ ದಟ್ಟಣೆ ಕೂಡ ಉಂಟಾಗಿದೆ. ದೀಪಾವಳಿಯನ್ನು ವಿಜೃಂಭಣೆಯಿಂದ ಆಚರಿಸಲು ಜನ ತುದಿಗಾಲಿನಲ್ಲಿ ನಿಂತಿದ್ದು, ಹಬ್ಬಕ್ಕೆ ಮತ್ತಷ್ಟು ಮೆರಗು ಕೊಡುವ ದೀಪ, ಹೊಸ ಬಟ್ಟೆ, ತರಕಾರಿ, ಹೂವು - ಹಣ್ಣುಗಳ ಖರೀದಿಯಲ್ಲಿ ತೊಡಗಿದ್ದಾರೆ.

ನಗರದ ಮಲ್ಲೇಶ್ವರದ ಮಾರುಕಟ್ಟೆಗಳಲ್ಲಿ ಹಬ್ಬಕ್ಕಾಗಿ ಜನಜಂಗುಳಿ ಹೆಚ್ಚಾಗಿತ್ತು. ಗ್ರಾಹಕರು ಪಂಚಮುಖಿ ದೀಪ, ಲಕ್ಷ್ಮಿ ದೇವಿ ದೀಪ, ನವಿಲು ದೀಪ, ಮೀನಿನ ದೀಪ ಸೇರಿದಂತೆ ಹಲವು ವಿನ್ಯಾಸಗಳಿಂದ ಕೂಡಿರುವ ಮಣ್ಣಿನಿಂದ ಮಾಡಿದ ಹಣತೆಗಳನ್ನು ಹೆಚ್ಚಾಗಿ ಖರೀದಿಸುತ್ತಿದ್ದಾರೆ. ಒಂದು ಹಣತೆಗೆ 100 ರಿಂದ ಸಾವಿರಾರು ರೂ. ಗಳನ್ನು ನೀಡಿ ಕೊಂಡೊಯ್ಯುತ್ತಿದ್ದಾರೆ. ಸಣ್ಣ ಅಳತೆಯ ಒಂದು ಡಜನ್ ಮಣ್ಣಿನ ಹಣತೆಗೆ 50 ರಿಂದ 60 ರೂ., ಸ್ವಲ್ಪ ದೊಡ್ಡ ಅಳತೆಯ ಮಣ್ಣಿನ ಹಣತೆಗೆ 100 ರಿಂದ 120 ರೂ. ವರೆಗೆ ಮಾರಾಟ ಮಾಡಲಾಯಿತು. ಆಕಾಶ ಬುಟ್ಟಿಗಳು ಮಾರಾಟವಾಗಿದ್ದು, ಅದರ ದರ 150 ರಿಂದ 2 ಸಾವಿರಕ್ಕೆ ನಿಗದಿಯಾಗಿತ್ತು. ಬೆಲೆಯನ್ನೂ ಲೆಕ್ಕಿಸದೆ ಜನರು ಕೊಳ್ಳುತ್ತಿರುವುದನ್ನು ಕಾಣಬಹುದಾಗಿತ್ತು.

ಪಟಾಕಿ ಖರೀದಿಯಲ್ಲಿ ಗ್ರಾಹಕರು (ETV Bharat)

ಜತೆಗೆ ಹಸಿರು ಪಟಾಕಿ, ಸರ್‌ಸುರ್ ಬತ್ತಿ, ಭೂಚಕ್ರ, ಹೂ-ಕುಂಡ, ವಿಷ್ಣುಚಕ್ರ, ರಾಕೆಟ್ ಸೇರಿದಂತೆ ಹಲವು ಬಗೆಯ ಹಸಿರು ಪಟಾಕಿಗಳನ್ನು ಮಾರಾಟ ಕೂಡ ಮಾಡಲಾಗುತ್ತಿದೆ. ಮಾರುಕಟ್ಟೆಯಲ್ಲಿ ಕಳೆದ ವಾರಕ್ಕಿಂತ ಹೂವಿನ ದರದಲ್ಲಿ ಏರಿಕೆ ಕಂಡುಬಂದಿದೆ. (ಇಂದು) ಗುರುವಾರ ಮತ್ತಷ್ಟು ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. ಒಂದು ಕೆ.ಜಿ. ಸೇವಂತಿಗೆ 250 ರಿಂದ 300 ರೂ., ಗುಲಾಬಿಗೆ 30 ರೂ., ಮಲ್ಲಿಗೆ 800 ರಿಂದ 1 ಸಾವಿರ ರೂ., ಕನಕಾಂಬರ 1,200 ರಿಂದ 1,600 ರೂ., ಚೆಂಡು ಹೂವು 150 ರೂ., ಅದೇ ರೀತಿ 1 ಕೆ.ಜಿ ಸೇಬು 150 ರಿಂದ 170 ರೂ., ದ್ರಾಕ್ಷಿ 90 ರೂ., ಕಿತ್ತಳೆ 45 ರಿಂದ 50 ರೂ., ಅನಾನಸ್ 60 ರೂ., ದಾಳಿಂಬೆ 150 ರಿಂದ 200 ರೂ., ಸಪೋಟಾ 65 ರೂ., ಬಾಳೆಹಣ್ಣು 115 ರೂ., ಸೀತಾಫಲ 50 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ.

ಪಟಾಕಿ ಖರೀದಿಯಲ್ಲಿ ಗ್ರಾಹಕರು (ETV Bharat)

ನಗರದಲ್ಲಿ ಹೆಚ್ಚಾದ ಸಂಚಾರದಟ್ಟಣೆ:ಅಕ್ಟೋಬರ್ 31 ರಿಂದ (ಇಂದಿನಿಂದ) ಅಧಿಕೃತವಾಗಿ ದೀಪಾವಳಿ ಆಚರಣೆಗಳು ನಡೆಯುವುದರಿಂದ ಜನರ ಸಿದ್ಧತೆಗಳು ನಡೆಯುತ್ತಿವೆ. ಐಟಿಬಿಟಿ, ಕೆಲ ಖಾಸಗಿ ಕಂಪನಿಗಳಲ್ಲಿ ಸೋಮವಾರದಂದೆ ದೀಪಾವಳಿ ಹಬ್ಬವನ್ನು ಆಚರಿಸಿ, ಪೂಜೆ ಸಲ್ಲಿಸಲಾಗಿದೆ. ಈ ಸಾಲು ರಜೆಗಳಿರುವುದರಿಂದ ಕಚೇರಿ ಹಾಗೂ ಶಾಲೆಗಳಿಗೂ ರಜೆ ಇರುವುದರಿಂದ ಜನರು ಊರುಗಳಿಗೆ ತೆರಳುತ್ತಿದ್ದಾರೆ. ಹಾಗಾಗಿ ಈಗಾಗಲೇ ಸಾರಿಗೆ ಇಲಾಖೆಯು ಹೆಚ್ಚುವರಿಯಾಗಿ ಬಸ್ ಬಿಡುಗಡೆ ಮಾಡಿದ್ದು, ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಜನ ಜಂಗುಳಿ ಹೆಚ್ಚಾಗಿ ಕಂಡುಬಂದಿತ್ತು. ಅಲ್ಲದೇ, ಒಂದಷ್ಟು ಜನ ತಮ್ಮ ತಮ್ಮ ವಾಹನಗಳಿಂದ ಊರಿಗೆ ಹೋಗುತ್ತಿರುವುದರಿಂದ ಬುಧವಾರ ಸಂಜೆ ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಇಂದು ಕೂಡ ಸಂಚಾರ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ದಟ್ಟಣೆ ನಿವಾರಿಸಲು ಪೊಲೀಸರು ರಸ್ತೆಗಿಳಿದಿದ್ದಾರೆ.

ಪಟಾಕಿ ಖರೀದಿಯಲ್ಲಿ ಗ್ರಾಹಕರು (ETV Bharat)

ದೀಪಾವಳಿ ಹಬ್ಬಕ್ಕಾಗಿ ತರಕಾರಿ, ಹಣ್ಣು ಮತ್ತು ಹೂವಿನ ಬೆಲೆಯಲ್ಲಿ ಏರಿಕೆ ಆಗಿದೆ. ಬೆಲೆ ಎಷ್ಟೇ ಏರಿಕೆಯಾದರೂ ಹಬ್ಬದ ಖರೀದಿಗೆ ಮುಂದಾಗಿದ್ದೇವೆ. ಆದರೂ, ನಮಗೆ ಈ ಬೆಳಕಿನ ಹಬ್ಬ ತುಂಬಾ ಮುಖ್ಯ ಎನ್ನುತ್ತಾರೆ ಮಲ್ಲೇಶ್ವರದ ಗ್ರಾಹಕಿ ಕಮಲಾ.

ಇದನ್ನೂ ಓದಿ:ಬೆಂಗಳೂರು: ದೀಪಾವಳಿ ಹಿನ್ನೆಲೆ ಪಟಾಕಿ ಹಚ್ಚುವರಿಗೆ ಪೊಲೀಸ್ ಇಲಾಖೆಯ ಸೂಚನೆಗಳಿವು

ABOUT THE AUTHOR

...view details