ಜಿಲ್ಲಾಧಿಕಾರಿ ಡಾ.ಕುಮಾರ ಮಾಹಿತಿ ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಗೆ ಮಾ.28 ರಂದು ಅಧಿಸೂಚನೆ ಹೊರಡಿಸಲಾಗುವುದು, ಅಂದಿನಿಂದ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭವಾಗಲಿದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಡಾ.ಕುಮಾರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈಗಾಗಲೇ ಘೋಷಣೆಯಾಗಿರುವ ವೇಳಾಪಟ್ಟಿಯಂತೆ ಚುನಾವಣಾ ಪ್ರಕ್ರಿಯೆ ನಡೆಯಲಿದ್ದು, ಗುರುವಾರ ಅಧಿಸೂಚನೆ ಹೊರಡಿಸಿದ ನಂತರ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ರಜಾ ದಿನ ಹೊರತುಪಡಿಸಿ ಏ.4 ರವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ ಎಂದರು.
ಏ.5 ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಏಪ್ರಿಲ್ 8 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ಏ. 26ರಂದು ಬೆಳಗ್ಗೆ 7 ರಿಂದ ಸಂಜೆ 6 ರವರೆಗೆ ಮತದಾನ ನಡೆಯಲಿದೆ. ಮತ ಎಣಿಕೆಯು ಜೂನ್ 4 ರಂದು ನಡೆಯಲಿದೆ ಎಂದು ತಿಳಿಸಿದರು. ಜಿಲ್ಲಾ ಕೇಂದ್ರ ಮಂಡ್ಯ ನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯ ಮೊದಲ ಮಹಡಿಯ ಕೊಠಡಿ ಸಂಖ್ಯೆ 29 ರಲ್ಲಿ ಬೆಳಗ್ಗೆ 11 ರಿಂದ ಮಧ್ಯಾಹ್ನ 3 ರವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ.
ನಾಮಪತ್ರ ಸ್ವೀಕೃತಿ ಕೇಂದ್ರದ 100 ಮೀಟರ್ ಸುತ್ತಳತೆಯ ಪ್ರದೇಶವನ್ನು ನಿಷೇಧಿತ ಪ್ರದೇಶ ಎಂದು ಘೋಷಿಸಲಾಗಿದ್ದು, ನಾಮಪತ್ರ ಸಲ್ಲಿಕೆ ವೇಳೆ ನಿಷೇಧಿತ ಪ್ರದೇಶಕ್ಕೆ ಮೂರು ವಾಹನಗಳಿಗೆ ಮಾತ್ರ ಪ್ರವೇಶಿಸಲು ಅವಕಾಶ ಇರಲಿದೆ. ಚುನಾವಣಾ ಅಧಿಕಾರಿಗಳ ಕಚೇರಿಗೆ ನಾಮಪತ್ರ ಸಲ್ಲಿಸಲು ಅಭ್ಯರ್ಥಿ ಸೇರಿದಂತೆ ಐದು ಮಂದಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ. ನಾಮಪತ್ರ ಸ್ವೀಕೃತಿ ಪ್ರಕ್ರಿಯೆಯನ್ನು ವಿಡಿಯೋ ರೆಕಾರ್ಡಿಂಗ್ ಮಾಡಲಾಗುವುದು. ನಾಮಪತ್ರ ಸಲ್ಲಿಸಲು ಅವಶ್ಯ ಇರುವ ದಾಖಲೆ ಮತ್ತು ಅನುಸರಿಸಬೇಕಾದ ಪ್ರಕ್ರಿಯೆ ಕುರಿತು ಚುನಾವಣಾ ಅಧಿಕಾರಿಗಳ ಕಾರ್ಯಾಲಯದಲ್ಲಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು.
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ 2,074 ಮತಗಟ್ಟೆಗಳಿದ್ದು, ಈ ಪೈಕಿ 252 ಮತಗಟ್ಟೆ ಮೈಸೂರು ಜಿಲ್ಲೆಯ ಕೆ.ಆರ್. ನಗರ ವಿಧಾನಸಭಾ ಕ್ಷೇತ್ರದ ಮತಗಟ್ಟೆಗಳಾಗಿವೆ. ಮಂಡ್ಯ ಜಿಲ್ಲೆಯಲ್ಲಿ 1,824 ಮತಗಟ್ಟೆಗಳಿವೆ. ಲೋಕಸಭಾ ಕ್ಷೇತ್ರದ ಆಯಾ ವಿಧಾನಸಭಾ ವಲಯದಲ್ಲಿ ಮತಯಂತ್ರಗಳ ಮಸ್ಟರಿಂಗ್, ಡಿ ಮಸ್ಟರಿಂಗ್ ನಡೆಯಲಿದೆ. ಮಳವಳ್ಳಿ ಶಾಂತಿ ಪಿಯು ಕಾಲೇಜು, ಮದ್ದೂರು ಎಚ್.ಕೆ. ವೀರಣ್ಣಗೌಡ ಪಿಯು ಕಾಲೇಜು, ಪಾಂಡವಪುರ ಟಿಎಸ್ಎಸ್ ಕೆ ಪ್ರೌಢಶಾಲೆ, ಮಂಡ್ಯ ನಗರದ ಮಂಡ್ಯ ವಿಶ್ವವಿದ್ಯಾನಿಲಯ, ಶ್ರೀರಂಗಪಟ್ಟಣ ಸರ್ಕಾರಿ ಪದವಿ ಪೂರ್ವ ಕಾಲೇಜು, ನಾಗಮಂಗಲ ಸರ್ಕಾರಿ ಪದವಿ ಪೂರ್ವ ಕಾಲೇಜು, ಕೆ.ಆರ್. ಪೇಟೆಯ ಕೆ.ಆರ್. ಪೇಟೆ ಕೃಷ್ಣ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಹಾಗೂ ಕೆ.ಆರ್. ನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ಮಸ್ಟರಿಂಗ್, ಡಿ ಮಸ್ಟರಿಂಗ್ ನಡೆಯಲಿದ್ದು, ಮತ ಎಣಿಕೆ ಮಂಡ್ಯ ನಗರದ ಮಂಡ್ಯ ವಿಶ್ವವಿದ್ಯಾನಿಲಯದ ಕಾಮರ್ಸ್ ಬ್ಲಾಕ್ನಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಜಪ್ತಿ ಮಾಡಿದ ಮದ್ಯ ಹಾಗೂ ನಗದು ಮಾಹಿತಿ: ಮಂಡ್ಯದಲ್ಲಿ ಅಕ್ರಮ ಮದ್ಯ ಹಾಗೂ ದಾಖಲೆ ಇಲ್ಲದ ನಗದು ಸೀಜ್ ಮಾಡಲಾಗಿದೆ. ಜಿಲ್ಲೆಯಲ್ಲಿ ಬರೋಬರಿ ದಾಖಲೆ ಇಲ್ಲದ 1 ಕೋಟಿ 4 ಲಕ್ಷ ನಗದು, ಹಾಗೂ 37 ಲೀಟರ್ ಮದ್ಯ ಜಪ್ತಿ ಮಾಡಲಾಗಿದೆ. 71 ಲಕ್ಷದ 77,836 ರೂ ಮೌಲ್ಯದ ಒಟ್ಟು 36,569 ಲೀ ಮದ್ಯ ವಶ. ಕಾನೂನು ಬಾಹಿರವಾಗಿ ಶೇಖರಣೆ ಮಾಡಿದ್ದ ಮದ್ಯ ಅಬಕಾರಿ ಇಲಾಖೆಯಿಂದ ಸುಮಾರು 193 ಪ್ರಕರಣ ದಾಖಲು, 10 ವಾಹನ ಸೀಜ್ ಮಾಡಲಾಗಿದೆ.
ಚೆಕ್ ಪೋಸ್ಟ್ಗಳಲ್ಲಿ ಜಿಲ್ಲೆಯಲ್ಲಿ ಒಟ್ಟು 1ಕೋಟಿ 4 ಲಕ್ಷದ 57,490 ರೂ. ನಗದು ಸೀಜ್. ಮಾ.18 ರಂದು ಮದ್ದೂರು ತಾಲೂಕಿನ ನಿಡಘಟ್ಟ ಚೆಕ್ ಪೋಸ್ಟ್ನಲ್ಲಿ 99 ಲಕ್ಷದ 22 ಸಾವಿರ ನಗದು ವಶಕ್ಕೆ ಪಡೆದು ಹಣದ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಹಾಗೆಯೇ ಮಂಡ್ಯದ ಬಸರಾಳು, ನಾಗಮಂಗಲದಲ್ಲಿ ದಾಖಲೆ ಇಲ್ಲದ ಹಣ ಸೀಜ್ ಮಾಡಲಾಗಿದೆ. ಅಕ್ರಮ ಗಾಂಜಾ ಪ್ರಕರಣ 64 ಸಾವಿರ ಮೌಲ್ಯದ 1KG 829 ಗ್ರಾಂ ವಶ. ಮಾ.17 ರಿಂದ ಮಾ.25ರ ವರಗೆ ಜಪ್ತಿ ಮಾಡಿದ ನಗದು ಹಾಗೂ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ:₹15 ಲಕ್ಷ ಮೌಲ್ಯದ ಸೀರೆಗಳು ವಶಕ್ಕೆ; ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ₹5 ಲಕ್ಷ ಪತ್ತೆ - Pre Poll Seizures