ಆತಂಕ ಸೃಷ್ಟಿಸಿದ ಹೊಸ ಕಾಳಿ ಸೇತುವೆ ಬಗೆಗಿನ ವಿಡಿಯೋ (ETV Bharat) ಕಾರವಾರ (ಉತ್ತರ ಕನ್ನಡ) : ಕಾಳಿ ನದಿ ಹಳೆ ಸೇತುವೆ ಕುಸಿತವಾದ ಬೆನ್ನಲ್ಲೇ ಇದೀಗ ಹೊಸ ಸೇತುವೆಯಲ್ಲೂ ಬಿರುಕು ಬಿಟ್ಟಿರುವ ಬಗ್ಗೆ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆತಂಕಕ್ಕೆ ಕಾರಣವಾಗಿತ್ತು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಜಿಲ್ಲಾಡಳಿತ ಸೇತುವೆ ಸುರಕ್ಷಿತವಾಗಿರುವ ಬಗ್ಗೆ ಸ್ಪಷ್ಟನೆ ನೀಡಿದೆ.
ಕಾಳಿ ನದಿಗೆ ನೂತನವಾಗಿ ನಿರ್ಮಿಸಿರುವ ಸೇತುವೆಯಲ್ಲಿ ಬಿರುಕು ಬಿಟ್ಟಿರುವ ಬಗ್ಗೆ ಬೋಟ್ ಮೂಲಕ ತೆರಳಿದವರು ವಿಡಿಯೋವೊಂದನ್ನು ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವುದು ಆತಂಕಕ್ಕೆ ಕಾರಣವಾಗಿತ್ತು. ಹಳೆ ಸೇತುವೆ ಕುಸಿತವಾದ ಬೆನ್ನಲ್ಲೇ ಇದೀಗ ಹೊಸ ಸೇತುವೆಯೂ ಬಿರುಕು ಬಿಟ್ಟಿದೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಆತಂಕಕ್ಕೆ ಕಾರಣವಾಗಿತ್ತು.
ಈ ವಿಷಯ ಜಿಲ್ಲಾಡಳಿತದ ಗಮನಕ್ಕೂ ಬಂದ್ದು ವಿಡಿಯೋ ಸಾರ್ವಜನಿಕರಲ್ಲಿ ಅನಗತ್ಯ ಭಯ ಮತ್ತು ಆತಂಕ ಮೂಡಿಸಿದ ಹಿನ್ನಲೆ ಕೂಡಲೇ ಈ ಬಗ್ಗೆ ತನಿಖೆ ನಡೆಸಿ ವಿವರವಾದ ವರದಿ ನೀಡುವಂತೆ ಐ.ಆರ್.ಬಿಗೆ ಸೂಚಿಸಿತ್ತು. ಅದರಂತೆ ಪರಿಶೀಲನೆ ನಡೆಸಿದ ಕಂಪೆನಿ ಅಧಿಕಾರಿಗಳು ವಿಡಿಯೋದಲ್ಲಿ ತೋರಿಸಿರುವ ಪ್ರದೇಶವು ನಿರ್ಮಾಣ ಹಂತದಲ್ಲಿ ಕಾಂಕ್ರೀಟ್ ಸ್ಲರಿಯ ಅತಿಕ್ರಮಿಸುವಿಕೆಯಿಂದ ಆಗಿರುವುದು ಎಂದು ಐ.ಆರ್.ಬಿ ದೃಢಪಡಿಸಿದೆ. ಸೇತುವೆಗೆ ಸಂಬಂಧಿಸಿದಂತೆ ಯಾವುದೇ ರಚನಾತ್ಮಕ ಹಾನಿ ಇರುವ ಸಂಭವವಿರುವುದಿಲ್ಲ ಎಂದು ಐ.ಆರ್.ಬಿ ವರದಿ ನೀಡಿದೆ.
'ಸಾರ್ವಜನಿಕರಲ್ಲಿ ಅನಗತ್ಯ ಭಯವನ್ನು ಉಂಟುಮಾಡುವ ಯಾವುದೇ ವಿಡಿಯೋಗಳು ಅಥವಾ ಮಾಹಿತಿಯನ್ನು ಹಂಚಿಕೊಳ್ಳದಂತೆ ಅಥವಾ ಪ್ರಸಾರ ಮಾಡದಂತೆ ಸಾರ್ವಜನಿಕರಿಗೆ ಜಿಲ್ಲಾಡಳಿತ ಸೂಚಿಸಿದೆ. ಇಂತಹ ತಪ್ಪು ಮಾಹಿತಿ ಹರಡುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇದಲ್ಲದೆ, ಈ ವಿಡಿಯೋವನ್ನು ವೈರಲ್ ಮಾಡಲು ಕಾರಣರಾದವರನ್ನು ಜಿಲ್ಲಾಡಳಿತವು ಸಕ್ರಿಯವಾಗಿ ಗುರುತಿಸುತ್ತಿದ್ದು, ಅವರ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು' ಎಂದು ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯ ತಿಳಿಸಿದ್ದಾರೆ.
ಸೂಕ್ಷ್ಮ ಪ್ರದೇಶಗಳಲ್ಲಿ ಎಚ್ಚರವಹಿಸಿ ಕೋಡಿಭಾಗದಲ್ಲಿ ಕೆಲವು ದಿನಗಳ ಹಿಂದೆ ಕುಸಿದ ಕಾಳಿ ನದಿ ಸೇತುವೆ ಸುತ್ತಮುತ್ತಲಿನ ಪ್ರದೇಶವು ಅತಿ ಸೂಕ್ಷ್ಮವಾಗಿರುತ್ತದೆ. ಅದೇ ರೀತಿ ಬೈತಖೋಲ-ಬಿಣಗಾ ಸಂಪರ್ಕಿಸುವ ಸುರಂಗ ಮಾರ್ಗಗಳಲ್ಲಿ ಮತ್ತು ಬಿಣಗಾ ಗುಡ್ಡದ ಎನ್ಎಚ್-66 ಚೈನೇಜ 109, 700 ರಿಂದ 111.450 ರವರೆಗಿನ ಪ್ರದೇಶದಲ್ಲಿ ಸಣ್ಣ ಪ್ರಮಾಣದ ಗುಡ್ಡ ಕುಸಿತ ಕಂಡು ಬಂದಿರುವುದರಿಂದ ಈ ಪ್ರದೇಶಗಳನ್ನು ಸಹ ಅತೀ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಲಾಗಿದೆ.
ಈ ಪ್ರದೇಶದಲ್ಲಿ ವಾಹನಗಳನ್ನು ನಿಲ್ಲಿಸುವುದು ಅಥವಾ ಫೋಟೋಗ್ರಫಿ ಮಾಡುವುದು ಅಥವಾ ಇನ್ನಿತರ ಯಾವುದೇ ಚಟುವಟಿಕೆ ಕೈಗೊಳ್ಳುವುದು ಅಪಾಯಕಾರಿಯಾಗಿರುತ್ತದೆ. ಆದ್ದರಿಂದ ಈ ಸೂಕ್ಷ್ಮ ಪ್ರದೇಶಗಳಲ್ಲಿ ಎಲ್ಲಾ ರೀತಿಯ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ ಎಂದು ಕಾರವಾರ ತಹಶೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ :ಕಾಳಿ ನದಿ ಸೇತುವೆ ಕುಸಿತ: ಬೋಟ್‌ನಲ್ಲಿ ಸ್ಥಳಕ್ಕೆ ತೆರಳಿ ಡಿಸಿಯೊಂದಿಗೆ NHAI ಅಧಿಕಾರಿಗಳ ಚರ್ಚೆ - Kali River Bridge Collapse Udpate