ಬೆಂಗಳೂರು:ರಾಜ್ಯ ರಾಜಕೀಯದಲ್ಲಿ ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಮತ್ತೆ ಸದ್ದು ಮಾಡುತ್ತಿದೆ. ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ಸಚಿವ ಕೆ.ಎನ್. ರಾಜಣ್ಣ ಅವರು ಮೂರು ಡಿಸಿಎಂ ಹುದ್ದೆ ಸೃಷ್ಟಿಯ ವಿಚಾರವನ್ನು ಮತ್ತೆ ಮುನ್ನೆಲೆಗೆ ತಂದಿದ್ದಾರೆ. ಇದು ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಲೋಕಸಭೆ ಚುನಾವಣೆ ಮುನ್ನ ಸಹ ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಹುದ್ದೆ ಹೇಳಿಕೆಗಳು ಸದ್ದು ಮಾಡಿದ್ದವು. ಇದು ಪ್ರತಿಪಕ್ಷಗಳಿಗೆ ಆಹಾರವಾಗಿತ್ತು. ಈ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಹೈ ಕಮಾಂಡ್ಗೆ ದೂರು ನೀಡಿದ್ದರು. ಬಳಿಕ ಹೈಕಮಾಂಡ್ ಮಧ್ಯಪ್ರವೇಶಿಸಿ, ಡಿಸಿಎಂ ಹುದ್ದೆಯ ವಿಚಾರವಾಗಿ ಸಾರ್ವಜನಿಕವಾಗಿ ಚರ್ಚಿಸದಂತೆ ರಾಜ್ಯ ನಾಯಕರಿಗೆ ಸೂಚನೆ ನೀಡಿತ್ತು. ನಂತರ ಡಿಸಿಎಂ ಹುದ್ದೆ ಸೃಷ್ಟಿ ವಿಚಾರ ತಣ್ಣಗಾಗಿತ್ತು. ಇದೀಗ ಮತ್ತೊಮ್ಮೆ ಡಿಸಿಎಂ ಹುದ್ದೆ ವಿಚಾರ ಚರ್ಚೆಯಾಗುತ್ತಿದೆ.
ಏನಿದು ಡಿಸಿಎಂ ಹುದ್ದೆಯ ರಾಜಕೀಯ ಲೆಕ್ಕಾಚಾರ?: ಕಾಂಗ್ರೆಸ್ ಪಾಳಯದಲ್ಲಿ ಡಿಸಿಎಂ ಹುದ್ದೆಯ ತಿಕ್ಕಾಟ ಮತ್ತೆ ಜೋರಾಗಿದೆ. ಸದ್ಯ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಸರ್ಕಾರದಲ್ಲಿ ಏಕ ಮಾತ್ರ ಡಿಸಿಎಂ ಎಂಬ ಅಲಿಖಿತ ನಿಯಮವಿದೆ. ಆದರೆ ಕೆ.ಎನ್. ರಾಜಣ್ಣ ಅವರು ಸಮುದಾಯವಾರು ಡಿಸಿಎಂ ಹುದ್ದೆ ಸೃಷ್ಟಿ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಹಾಗೆಯೇ ಸತೀಶ್ ಜಾರಕಿಹೊಳಿ, ಜಮೀರ್ ಅಹಮದ್ ಬಹಿರಂಗವಾಗಿ ಮತ್ತು ಪರೋಕ್ಷವಾಗಿ ಬ್ಯಾಟ್ ಬೀಸುತ್ತಿದ್ದಾರೆ.
ಕೆಲವರು ಮೂರು ಡಿಸಿಎಂ ಹುದ್ದೆ ಸೃಷ್ಟಿ ಬೇಡಿಕೆ ಇಡುತ್ತಿದ್ದರೆ, ಇನ್ನೂ ಕೆಲವರು ಐದು ಡಿಸಿಎಂ ಹುದ್ದೆ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ. ಈ ಮೂಲಕ ಎಲ್ಲ ಸಮುದಾಯಗಳು ಕಾಂಗ್ರೆಸ್ ಪರ ವಾಲಲಿವೆ ಎಂಬುದು ಅವರ ಅಭಿಪ್ರಾಯವಾಗಿದೆ. ಮುಂದಿನ ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲೂ ಇದು ಪಕ್ಷಕ್ಕೆ ಅನುಕೂಲವಾಗಲಿದೆ. ಜೊತೆಗೆ ಪ್ರಾದೇಶಿಕವಾರು ಡಿಸಿಎಂ ಹುದ್ದೆ ಸೃಷ್ಟಿಸಿದರೆ ಪಕ್ಷ ಸಂಘಟನೆಗೆ ಶಕ್ತಿ ಬರಲಿದೆ ಎಂಬುದು ಕೆಲವರ ವಾದವಾಗಿದೆ.
ಇದನ್ನೂ ಓದಿ: ಅಂಗನವಾಡಿಗಳಲ್ಲೇ ಎಲ್ಕೆಜಿ, ಯುಕೆಜಿ ಆರಂಭಿಸಲು ಸಿಎಂ ಸಹಮತ : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ - LKG UKG IN ANGANWADIS
ಡಿಸಿಎಂ ಹುದ್ದೆ ಮೇಲೆ ಕಣ್ಣಿಟ್ಟವರು ಯಾರು?:ಕೆಲ ಹಿರಿಯ ಸಚಿವರು ಡಿಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ. ಆಕಾಂಕ್ಷಿಗಳ ಪೈಕಿ ದಲಿತ ಸಮುದಾಯದ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಮುಂಚೂಣಿಯಲ್ಲಿದ್ದಾರೆ. ಇವರು ಪರೋಕ್ಷವಾಗಿ ಆಗಾಗ ತಮ್ಮ ಡಿಸಿಎಂ ಕನಸನ್ನು ವ್ಯಕ್ತಪಡಿಸುತ್ತಲೇ ಇದ್ದಾರೆ. ಸಚಿವ ಕೆ.ಎನ್. ರಾಜಣ್ಣ ಬಹಿರಂಗವಾಗಿ ತಮ್ಮ ಡಿಸಿಎಂ ಹುದ್ದೆಯ ಆಸೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಇನ್ನು, ಹಿಂದುಳಿದ ವರ್ಗದ ನಾಯಕರಾದ ಸಚಿವ ಸತೀಶ್ ಜಾರಕಿಹೊಳಿ ಡಿಸಿಎಂ ಹುದ್ದೆ ಮೇಲೆ ಬಹು ದಿನಗಳಿಂದ ಕಣ್ಣಿಟ್ಟಿದ್ದಾರೆ. ಈ ಸಂಬಂಧ ಬಹಿರಂಗವಾಗಿ ಈ ಮುಂಚೆ ತಮ್ಮ ಆಸೆಯನ್ನು ಹೊರಗೆಡವಿದ್ದಾರೆ. ಇವರ ಜೊತೆಗೆ ಲಿಂಗಾಯತ ಸಮುದಾಯದ ಸಚಿವ ಎಂ.ಬಿ. ಪಾಟೀಲ್ ಕೂಡ ಡಿಸಿಎಂ ಹುದ್ದೆಯ ಮೇಲೆ ಕಣ್ಣಿಟ್ಟಿರುವುದು ಗೌಪ್ಯವಾಗಿ ಉಳಿದಿಲ್ಲ. ಇತ್ತ ಅಲ್ಪಸಂಖ್ಯಾತ ಸಚಿವ ಜಮೀರ್ ಅಹಮದ್ ಖಾನ್ ಕೂಡ ಆಕಾಂಕ್ಷಿಯಾಗಿದ್ದಾರೆ.
ಡಿ.ಕೆ.ಸುರೇಶ್, ಪ್ರಿಯಾಂಕ್ ಖರ್ಗೆಯಿಂದ ಆಕ್ಷೇಪ: ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಬೇಡಿಕೆಗೆ ಮಾಜಿ ಸಂಸದ ಡಿ.ಕೆ. ಸುರೇಶ್ ಪರೋಕ್ಷವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಎಲ್ಲಾ ಸಮುದಾಯಕ್ಕೂ ನ್ಯಾಯ ಸಿಗಲಿ. ಪಕ್ಷ ತೀರ್ಮಾನ ಮಾಡಿ ಇನ್ನೂ ಐದು ಜನರನ್ನು ಡಿಸಿಎಂ ಮಾಡಿದ್ರು ಒಳ್ಳೆದು. ಹೆಚ್ಚು ಬಾರಿ ಗೆದ್ದ ರಾಮಲಿಂಗಾ ರೆಡ್ಡಿ, ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ಜಮೀರ್, ಕೃಷ್ಣ ಬೈರೇಗೌಡ, ಚಲುವರಾಯಸ್ವಾಮಿ, ದಿನೇಶ್ ಗುಂಡೂರಾವ್, ಆರ್.ವಿ. ದೇಶಪಾಂಡೆ ಇದ್ದಾರೆ. ಎಲ್ಲರನ್ನೂ ಮಾಡಲಿ ಯಾರು ಬೇಡ ಅಂದ್ರು ಎಂದು ಡಿ.ಕೆ. ಸುರೇಶ್ ವ್ಯಂಗ್ಯವಾಡಿದರು.
ಈ ವಿಚಾರವಾಗಿ ಇಂದು ಕಲಬುರಗಿಯಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಎಲ್ಲರಿಗೂ ಕೇಳುವ ಹಕ್ಕಿದೆ. ಆದರೆ ಹೈಕಮಾಂಡ್ ಬಳಿ ಹೋಗಿ ಕೇಳಲಿ, ಯಾರೂ ಬೇಡ ಅಂದಿಲ್ಲ. ಡಿಸಿಎಂ ಮಾಡುವುದರಿಂದಲೇ ಎಲ್ಲ ಆಗುತ್ತೆ ಅನ್ನೋದಾದ್ರೆ ಸಿಎಂನ ಮಾತ್ರ ಬಿಟ್ಟು ಇಡೀ ಕ್ಯಾಬಿನೆಟ್ ಡಿಸಿಎಂ ಆಗಲಿ, ಅಂದ್ರೆ ಆಗುತ್ತಾ?. ನಮ್ಮ ಕೆಲಸ ಏನು? ಚುನಾವಣೆಯಲ್ಲಿ ನಾಲ್ಕೈದು ಸ್ಥಾನ ಕಡಿಮೆ ಬಂದಿವೆ. ಅದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಸಿಎಂ ಹುದ್ದೆನೂ ಕೇಳಿ ಯಾರು ಬೇಡ ಅಂದೋರು ಎಂದು ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ: ಚನ್ನಪಟ್ಟಣ ಉಪಚುನಾವಣೆ: ಡಿಕೆಶಿ ಎಂಟ್ರಿಯಿಂದ 'ಮೈತ್ರಿ'ಯಲ್ಲಿ ಜಿಜ್ಞಾಸೆ - Channapatna Bypoll