ಬೆಂಗಳೂರು: ಪಕ್ಷದ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಪುತ್ರ ಕೆ.ಇ ಕಾಂತೇಶ್ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡುವ ಆಲೋಚನೆ ಪಕ್ಷದ ಹೈಕಮಾಂಡ್ ನಾಯಕರಲ್ಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಡಾಲರ್ಸ್ ಕಾಲೋನಿ ನಿವಾಸಕ್ಕೆ ರಾಜವಂಶಸ್ಥ ಯದುವೀರ್ ಒಡೆಯರ್ ಇಂದು ಭೇಟಿ ನೀಡಿದರು. ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆ ಆಗಿರುವ ಹಿನ್ನೆಲೆ ಯಲ್ಲಿ ಪಕ್ಷದ ಹಿರಿಯ ನಾಯಕರೂ ಆಗಿರುವ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಯದುವೀರ್ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ರಾಜಕುಟುಂಬದ ಯದುವೀರ್ ಅವರನ್ನು ಮೈಸೂರು ಕೊಡುಗು ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದೆ. ಯದುವೀರ ಸ್ಪರ್ಧೆಯಿಂದ ಸುತ್ತಮುತ್ತಲ ಕ್ಷೇತ್ರಗಳಲ್ಲಿ ಅನುಕೂಲ ಆಗಲಿದೆ. ಅವರು ಕೂಡಾ ಅಕ್ಕಪಕ್ಕದ ಕ್ಷೇತ್ರಗಳಲ್ಲಿ ಓಡಾಡಲು ಒಪ್ಪಿಕೊಂಡಿದ್ದಾರೆ, ಅವರು ಪಕ್ಷಕ್ಕೆ ಬಂದಿರುವುದು ದೊಡ್ಡ ಬಲ ಬಂದಂತಾಗಿದೆ ಎಂದರು.
ನಾವು ಈ ಬಾರಿ 25 ರಿಂದ 26 ಕ್ಷೇತ್ರಗಳಲ್ಲಿ ಗೆಲ್ಲುವ ಗುರಿ ಹಾಕಿಕೊಂಡಿದ್ದೇವೆ. ಪಕ್ಷದ ಯೋಚನೆಯಂತೆ ಎಲ್ಲ ಕ್ಷೇತ್ರಗಳನ್ನು ಗೆಲ್ಲಲು ಯದುವೀರ್ ಶಕ್ತಿಯೂ ಸಹಕಾರಿಯಾಗಲಿದೆ. ಅದಕ್ಕಾಗಿ ಪಕ್ಷದ ಪರವಾಗಿ ರಾಜ್ಯದ ಜನತೆಯ ಪರವಾಗಿ ಅವರನ್ನು ಪಕ್ಷಕ್ಕೆ ಸ್ವಾಗತ ಮಾಡುತ್ತೇನೆ ಎಂದರು. ಪ್ರತಾಪಸಿಂಹಗೆ ಟಿಕೆಟ್ ಕೈತಪ್ಪಿದ ವಿಚಾರದ ಬಗ್ಗೆ ಯಾವುದೇ ಪ್ರಶ್ನೆ ಕೇಳಬೇಡಿ ಎಲ್ಲರೂ ಸಮಾಧಾನಗೊಂಡಿದ್ದಾರೆ. ಎಲ್ಲರೂ ಬೆಂಬಲ ನೀಡುತ್ತಾರೆ ಎಂದರು.
ಯಡಿಯೂರಪ್ಪ ನುಡಿದಂತೆ ನಡೆಯಲಿಲ್ಲ ಎನ್ನುವ ಬೇಸರವನ್ನು ಈಶ್ವರಪ್ಪ ಹೊರಹಾಕಿರುವುದು ತಮ್ಮ ಗಮನದಲ್ಲಿದೆ. ಅವರ ಜೊತೆ ಮಾತಾಡುತ್ತೇನೆ, ಹೈಕಮಾಂಡ್ ಕೂಡ ಮಾತನಾಡಲಿದೆ. ಅವರೂ ಸರಿ ಹೋಗುತ್ತಾರೆ ಅವರ ಮಗನಿಗೆ ಎಂಎಲ್ಸಿ ಮಾಡುವ ಬಗ್ಗೆ ದೆಹಲಿ ಮಟ್ಟದಲ್ಲಿ ಚರ್ಚೆಯಾಗುತ್ತಿದೆ ಎಂದು ತಿಳಿಸಿದರು.