ಗುಂಡೂರಾವ್ ಪತ್ನಿ ಟಬು ರಾವ್ ಮಾಧ್ಯಮದವರೊಂದಿಗೆ ಮಾತನಾಡಿದರು. ಬೆಂಗಳೂರು: ಸಚಿವ ದಿನೇಶ್ ಗುಂಡೂರಾವ್ ಅವರನ್ನು ಟೀಕಿಸುವ ಭರದಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಸಂಜಯನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ. ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ದಿನೇಶ್ ಗುಂಡೂರಾವ್ ಅವರ ಪತ್ನಿ ಟಬು ರಾವ್ ದೂರು ನೀಡಿದ್ದಾರೆ.
ಬಳಿಕ ಮಾತನಾಡಿದ ತಬು ರಾವ್, ನಾನು ರಾಜಕೀಯದಲ್ಲಿಲ್ಲ. ಬಸವನಗೌಡ ಪಾಟೀಲ್ ಯತ್ನಾಳ್ ಯಾರು ಎಂಬುದು ಸಹ ನನಗೆ ಗೊತ್ತಿಲ್ಲ. ಧರ್ಮಗಳನ್ನು ಮೀರಿ ಸಾಮಾಜಿಕ ಕಾರ್ಯಗಳಲ್ಲಿ ನಾನು ತೊಡಗಿಕೊಂಡಿದ್ದೇನೆ. ಆದರೂ ಸಹ ಅವರು ನನ್ನನ್ನು ಉದ್ದೇಶಿಸಿ ಆ ರೀತಿಯ ಹೇಳಿಕೆ ನೀಡಿದ್ದಾರೆ. ಯಾರದ್ದೋ ಪತ್ನಿ, ಮಕ್ಕಳ ಬಗ್ಗೆ ಮಾತನಾಡುವುದಾ ಬಿಜೆಪಿ ರಾಜಕೀಯ?, ಭಾರತ ಮಾತೆ ಎಂದು ಪದೇ ಪದೇ ಹೇಳುವವರು ಹೆಣ್ಣಿಗೆ ಕೊಡುವ ಮರ್ಯಾದೆ ಇದೇನಾ ಎಂದು ಪ್ರಶ್ನಿಸಿದರು.
ದಿನೇಶ್ ಗುಂಡೂರಾವ್ ರಾಜಕೀಯದಲ್ಲಿದ್ದಾರೆ. ಅವರ ಬಗ್ಗೆ ಮಾತನಾಡುವುದು ಸಹಜ. ಆದರೆ ನನ್ನ ಬಗ್ಗೆ ಮಾತನಾಡುವುದನ್ನು ನಾನು ಸಹಿಸುವುದಿಲ್ಲ. ಅದಲ್ಲದೇ ಪದೇ ಪದೇ ಮುಸ್ಲಿಂ ಕಾರ್ಡ್ ಪ್ಲೇ ಮಾಡುವುದನ್ನು ನೋಡಿ ಸಾಕಾಗಿದೆ. ನಾನು ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಿದ್ದೇನೆ. ಎಫ್ಐಆರ್ ದಾಖಲಿಸಿಕೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದೇನೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಶನಿವಾರ ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದ ಬಸನಗೌಡ ಪಾಟೀಲ್ ಯತ್ನಾಳ್, ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಎನ್‌ಐಎ ಅಧಿಕಾರಿಗಳು ಬಿಜೆಪಿ ಪದಾಧಿಕಾರಿಯನ್ನು ಬಂಧಿಸಿದ್ದಾರೆ ಎಂದು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದ ದಿನೇಶ್ ಗುಂಡೂರಾವ್ ಅವರನ್ನು ಟೀಕಿಸುವ ಸಂದರ್ಭದಲ್ಲಿ, ದಿನೇಶ್ ಗುಂಡೂರಾವ್ ಮನೆಯಲ್ಲೇ ಅರ್ಧ ಪಾಕಿಸ್ತಾನ ಇದೆ. ದಿನೇಶ್ ಗುಂಡೂರಾವ್‌ಗೆ ದೇಶ ವಿರೋಧಿ ಹೇಳಿಕೆ ನೀಡುವುದು ಚಟವಾಗಿದೆ ಎಂದು ಯತ್ನಾಳ್ ಆರೋಪಿಸಿದ್ದರು.
ಇದನ್ನೂಓದಿ:ಆರ್‌ಎಸ್‌ಎಸ್ ಬಗ್ಗೆ ತಿಳಿದುಕೊಳ್ಳದೆ ಮಾತನಾಡಿರುವುದಕ್ಕೆ ಕ್ಷಮಿಸಿ: ಪ್ರಜ್ವಲ್ ರೇವಣ್ಣ - Prajwal Revanna